ಆಟೋ ಅಣ್ಣ.. 24 ಕಿಮೀ ದೂರವಿದ್ರೂ ರೈಡ್ ತಗೊಂಡ್ಯಲ್ಲ ನಿಂಗೊಂದು ಸಲಾಂ! ಬೆಂಗಳೂರು ಟ್ರಾಫಿಕ್‌ನ ಮತ್ತೊಂದು ಕಥೆ!
ಬೆಂಗಳೂರು, ಮೇ 16: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ವರ್ಲ್ಡ್ ಫೇಮಸ್ ಅಂತಾ ನಿಮಗೆ ಗೊತ್ತೇ ಇದೆ. ಸಿಲ್ಕ್ ಬೋರ್ಡ್ ಟ್ರಾಫಿಕ್‌ನಲ್ಲಿ ಮದುವೆಯಾಗಿ, ಮಗು ಆಗುವ ಕಾಲ್ಪನಿಕ ಕಥೆಯನ್ನು ನೀವು ಕೇಳಿರುತ್ತೀರಿ. ಉದ್ಯಾನ ನಗರಿಯ ಸಂಚಾರ ದಟ್ಟಣೆ ನೋಡಿ ಹೇಗಪ್ಪ ಇಲ್ಲಿ ಜೀವನ ಮಾಡೋದು ಅನ್ಕೊಂಡಿರ್ತಿರಿ. ಅಷ್ಟಕ್ಕೂ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ? ಅಂತದ್ದೇನಾಯ್ತು ಅಂತಾ ನಿಮ್ಮ ತಲೆಯಲ್ಲಿ ಓಡ್ತಿರಬಹುದು.
ನಿಮ್ಮ ಮೆದುಳಿನ ಯೋಚನೆಗೆ ಉತ್ತರ ಎಂಬಂತೆ ಬೆಂಗಳೂರಿನ ಟ್ರಾಫಿಕ್‌ಗೆ ಸಂಬಂಧಿಸಿದಂತೆ ಮತ್ತೊಂದು ವಿಚಿತ್ರ ಘಟನೆ ವರದಿಯಾಗಿದೆ. ಇಲ್ಲಿನ ನಗರದ ಟ್ರಾಫಿಕ್ ಹಾಗೂ ಅದರಿಂದ ಅನುಭವಿಸುವ ಕಿರಿಕಿರಿಯನ್ನು ಜನ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನಿಮ್ಮ ಗಮನಕ್ಕೆ ಬಂದೇ ಇರುತ್ತದೆ. ಅದೇ ರೀತಿ ಅನುಶಾಂಕ್ ಜೈನ್ ಎಂಬುವವರು ಟ್ವಿಟರ್‌ನಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದು, ಅದನ್ನು ನೋಡಿದರೇ ನೀವು ತಬ್ಬಿಬ್ಬಾಗುವುದು ಗ್ಯಾರಂಟಿ.

ಹೌದು, ಅನುಶಾಂಕ್ ಜೈನ್ ಅವರು ಪೀಕ್ ಅವರ್‌ನಲ್ಲಿ ಉಬರ್ ಆಟೋ ಬುಕ್ ಮಾಡಲು ಹೋಗಿ ಅನುಭವಿಸಿದ ಸಂಕಟವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉಬರ್ ಆಪ್‌ನಲ್ಲಿ ಅನುಶಾಂಕ್ ಜೈನ್ ಆಟೋ ಬುಕ್ ಮಾಡಲು ಹೋದಾಗ ಮೊದಲು ಯಾರು ಕೂಡ ಇವರ ರೈಡಿಂಗ್ ಅನ್ನು ಒಪ್ಪಿಕೊಂಡಿದ್ದಿಲ್ಲ. ಬಹಳಷ್ಟು ಸಮಯದ ಬಳಿಕ ಓರ್ವ ಆಟೋ ಚಾಲಕ ಅನುಶಾಂಕ್ ಅವರ ರೈಡಿಂಗ್ ಅನ್ನು ಒಪ್ಪಿಕೊಂಡಿದ್ದಾರೆ. ಮತ್ತೆನಿದೆ ಆಟೋ ಬಂತಲ್ಲ ಅನ್ಕೋಬೇಡಿ, ಅಲ್ಲೇ ಇರೋದು ನೋಡಿ ಕಹಾನಿ ಮೇಲೆ ಟ್ವಿಸ್ಟ್.
ಅನುಶಾಂಕ್ ಜೈನ್ ರೈಡಿಂಗ್ ಅನ್ನು ಒಪ್ಪಿಕೊಂಡ ಆಟೋ ಚಾಲಕ ಬರೋಬ್ಬರಿ 24 ಕಿಲೋ ಮೀಟರ್ ದೂರದಲ್ಲಿದ್ದ. ಎಷ್ಟು.. ಭರ್ತಿ 24 ಕಿಲೋ ಮೀಟರ್.. ಕಾಯುವ ಸಮಯ ಎಷ್ಟಿತ್ತು ಗೊತ್ತಾ ಬರೋಬ್ಬರಿ 71 ನಿಮಿಷ. ಈ ಅವಧಿಯಲ್ಲಿ ನೀವು ಬೆಂಗಳೂರಿನಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇನಲ್ಲಿ ಹೋಗಬಹುದು. ಅದಾಗಿ ಕೆಲವೇ ನಿಮಿಷದಲ್ಲಿ ಚಾಲಕ ಅನುಶಾಂಕ್ ಅವರ ರೈಡ್ ಅನ್ನು ರದ್ದುಗೊಳಿಸಿರುವ ಪ್ರಸಂಗ ನಡೆದಿದೆ.
Huge respect for him if he actually shows up. #peakbengaluru pic.twitter.com/6rQt1TswPU
— Anushank Jain (@madmax_anushank) May 16, 2023
ಇಂತಹ ಬೆಂಗಳೂರು ಟ್ರಾಫಿಕ್ ವಿಚಿತ್ರಕ್ಕೆ ಸಾಕ್ಷಿಯಾದ ಅನುಶಾಂಕ್ ಜೈನ್ ಅದನ್ನು ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೊನೆಗೂ ಆಟೋ ಚಾಲಕ ಕಾಣಿಸಿಕೊಂಡಿದ್ದಾರೆ. ಅವರಿಗೆ ನನ್ನದೊಂದು ದೊಡ್ಡ ಸಲಾಂ ಎಂದು ಹೇಳಿದ್ದು, #PeakBengaluru ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಪ್‌ಲೋಡ್ ಮಾಡಿದ್ದಾರೆ.
ಇದರ ನಡುವೆಯೇ ಮತ್ತೊಬ್ಬ ಪ್ರಯಾಣಿಕರು ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ ಯಾವಾಗಲೂ ಟ್ರಾಫಿಕ್ ಸಮಸ್ಯೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತಿದ್ದಿಲ್ಲ. ಆದರೆ, ಇವತ್ತು ನಾನು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೇನೆ. ಟ್ರಾಫಿಕ್ ಅನ್ನು ತಪ್ಪಿಸಲು ನೀವು ಬೇಗ ಮನೆ ಬಿಡಿ ಎಂಬ ನನ್ನ ವಾದವನ್ನು ಇಲ್ಲಿನ ಸಂಚಾರ ದಟ್ಟಣೆ ತಳ್ಳಿಹಾಕಿದೆ. ಮನೆಯಿಂದ ಬೆಳಗ್ಗೆ 7:40ಕ್ಕೆ ಬಿಟ್ಟಿದ್ದೀನಿ. ಆದರೆ, 6 ಕಿಮೀ ಪ್ರಯಾಣಕ್ಕಾಗಿ ಇನ್ನೂ ರಸ್ತೆಯಲ್ಲಿಯೇ ಇದ್ದೇನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಶ್ವದ ಎರಡನೇ ಅತಿ ಹೆಚ್ಚಿನ ಜನಸಂದ್ರಣೆಯ ನಗರ!
ಡಚ್ ಲೊಕೇಶನ್ ಟೆಕ್ನಾಲಜಿ ಪರಿಣಿತ ಕಂಪನಿ ಟಾಮ್ ಟಾಮ್ ಪ್ರಕಟಿಸಿದ ಟ್ರಾಫಿಕ್ ಇಂಡೆಕ್ಸ್ 2022ರ ಪ್ರಕಾರ, ಬೆಂಗಳೂರಿನ ಸಿಟಿ ಸೆಂಟರ್ (ಬಿಬಿಎಂಪಿ ಪ್ರದೇಶ) ವಿಶ್ವದ ಎರಡನೇ ಅತಿ ಹೆಚ್ಚಿನ ಜನದಟ್ಟಣೆಯ ಪ್ರದೇಶವಾಗಿದೆ. ಬೆಂಗಳೂರಿನಲ್ಲಿ 10 ಕಿಮೀ ಕ್ರಮಿಸಲು ಪ್ರಯಾಣಿಕರಿಗೆ ಸರಾಸರಿ 29 ನಿಮಿಷ 10 ಸೆಕೆಂಡುಗಳ ಅಗತ್ಯ ಇದೆ ಎಂದು ವರದಿ ತೋರಿಸಿದೆ. ಅದಲ್ಲದೇ, ಬೆಂಗಳೂರು ಸಿಟಿ ಸೆಂಟರ್‌ನಲ್ಲಿ ಪೀಕ್ ಅವರ್ ಸಮಯದಲ್ಲಿ ಇಲ್ಲಿನ ಸರಾಸರಿ ವೇಗ ಗಂಟೆಗೆ 18 ಕಿಮೀ ಎಂದರೇ ನೀವು ನಂಬಲೇಬೇಕು.












Click it and Unblock the Notifications