Karnataka Government: ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಾಳೆಯೇ ಮಹದಾಯಿ ಯೋಜನೆ ಜಾರಿ: ಸಿದ್ದರಾಮಯ್ಯ ಘೋಷಣೆ
ಬೆಳಗಾವಿ, ಏಪ್ರಿಲ್ 20: ಭದ್ರಾ ಮೇಲ್ದಂಡೆ ಯೋಜನೆಗೆ ಇವತ್ತಿನವರೆಗೂ ಒಂದು ಪೈಸೆಯನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನೇ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ತಕ್ಷಣ ಈ ಎಲ್ಲಾ ನೀರಾವರಿ ಯೋಜನೆಗಳನ್ನು ಆರಂಭಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದರು. ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಕರಿಗೆ ಶೇ40 ರಷ್ಟು , ಪರಿಶಿಷ್ಠ ಸಮಾಜದ ಕೃಷಿಕರಿಗೆ ಶೇ50 ರಷ್ಟು ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದ್ದೇವೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಂತ್ರಗಳ ಮೇಲಿನ ಅವಲಂಭನೆ ಹೆಚ್ಚಾಗಿದೆ. ಹೀಗಾಗಿ ರಿಯಾಯ್ತಿ ಬೆಲೆಯಲ್ಲಿ ಕೃಷಿಯಂತ್ರಗಳ ವಿತರಣೆ ಸರ್ಕಾರ ಮಾಡುತ್ತಿದೆ ಎಂದರು.

ಕೃಷಿಭಾಗ್ಯವನ್ನು ಒಣಕೃಷಿ ಬೆಳೆಗಾರರಿಗೆ ಜಾರಿಗೆ ತಂದಿದ್ದೇವೆ. ಕಳೆದ ವರ್ಷ 25 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡ ಮಾಡಿಸಿದ್ದೇವೆ. ಈ ವರ್ಷ ಇದು ಇನ್ನೂ ಹೆಚ್ಚಾಗುತ್ತದೆ. ಕೃಷಿಹೊಂಡ ಬಹಳ ಉಪಯುಕ್ತ ಯೋಜನೆಯಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ ಎಂದರು.ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಆಹಾರ ಉತ್ಪಾದಕರಾದ ನಿಮ್ಮ ಕಾರಣದಿಂದ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು ಕೊಡಲು ಶುರು ಮಾಡಿದೆವು ಎಂದರು.
ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಕಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 150 ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಇದರಲ್ಲಿ 102 ಪೂರ್ಣಗೊಂಡಿವೆ. ಉಳಿದವು ಸದ್ಯದಲ್ಲೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 6928 ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ತಿಳಿಸಿದಂತೆ ಶಿಕ್ಷಣ, ಸಂಘಟನೆ , ಹೋರಾಟಗಳು ಶೋಷಿತವರ್ಗಗಳಿಗೆ ಮೂಲಮಂತ್ರವಾಗಬೇಕು. ಆಗಮಾತ್ರ ಗುಲಾಮಗಿರಿಯನ್ನು ನೀಗಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ದೀನದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಅವಕಾಶವಂಚಿತರು ಸಮಾಜದಲ್ಲಿ ಏಳಿಗೆಯನ್ನು ಕಾಣಲು ಶಿಕ್ಷಣ ಅತ್ಯಗತ್ಯ. ಶಿಕ್ಷಣ, ಸಂಘಟನೆ , ಹೋರಾಟ ಎಂಬ ಮೂರುಮಂತ್ರಗಳನ್ನು ಶೋಷಿತವರ್ಗಗಳಿಗೆ ಬೋಧಿಸಿದ್ದಾರೆ.
ಸಮಾಜದಲ್ಲಿ ಅಸಮಾನತೆ ಸಾಕಷ್ಟಿದೆ. ಬಹುಸಂಖ್ಯಾತರು ಅಕ್ಷರಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಮನುಸ್ಮೃತಿಯ ಪಾಲನೆಯಿಂದ, ಸಮಾಜದಲ್ಲಿ ತಂದು, ಬ್ರಾಹ್ಮಣರು, ವೈಶ್ಯರು,ಕ್ಷತ್ರಿಯರು ಹಾಗೂ ಶೂದ್ರರು ಎಂದು ಚತುರ್ವಣ ಪದ್ಧತಿಯನ್ನು ಜಾರಿಗೆ ತಂದು, ಶೂದ್ರರನ್ನು ಶಿಕ್ಷಣದ ಅವಕಾಶವನ್ನು ನೀಡಲಾಗಿರಲಿಲ್ಲ. ಆದ್ದರಿಂದ ಸಮಾನ ಅವಕಾಶ ಹಾಗೂ ಶಿಕ್ಷಣ ಪಡೆದ ವರ್ಗಗಳಷ್ಟೇ ಸಮಾಜದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಾಯಿತು ಎಂದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಸಮಾನತೆಯಿರುವ ವೈರುಧ್ಯದ ಸಮಾಜದಲ್ಲಿ ಕಾಲಿಡುತ್ತಿದ್ದೇವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರವರು ತಿಳಿಸಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಅವಕಾಶ ವಂಚಿತರಿಗೆ, ಬಡವರಿಗೆ, ಶೋಷಿತರಿಗೆ ಸಮಾನ ಅವಕಾಶ ಹಾಗೂ ಸಮಾನತೆಯನ್ನು ಪಡೆಯಲು ಹೋರಾಟ ಮಾಡಬೇಕು ಎಂದರು.












Click it and Unblock the Notifications