ದೇವೇಗೌಡರ ಮಣಿಸಲು ಕಾಂಗ್ರೆಸ್ ದೊಡ್ಡ ಕಾರ್ಯತಂತ್ರ
ಹಾಸನ, ಮಾರ್ಚ್ 27: ನಾಮಪತ್ರ ಸಲ್ಲಿಕೆ ನಿನ್ನೆಗೆ ಮುಗಿದಿದ್ದು ಲೋಕಸಭಾ ಚುನಾವಣೆ ರಂಗೇರುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಜೆಡಿಎಸ್ ಅನ್ನು ಎದುರಿಸಲು ಪ್ರಬಲ ಯೋಜನೆಯನ್ನೇ ಹಾಕಿಕೊಂಡಿದೆ.
ಮುಖ್ಯವಾಗಿ ಹಾಸನದ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಮಣಿಸಲು ಪಕ್ಷವು ದೊಡ್ಡ ಮಟ್ಟದ ಕಾರ್ಯತಂತ್ರ ರೂಪಿಸಿದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷವು ದೇವೇಗೌಡರ ಕುಟುಂಬದ ಎದುರಾಳಿ ಡಿಕೆ ಶಿವಕುಮಾರ್ ಅವರನ್ನು ಹಾಸನ ಉಸ್ತುವಾರಿಗೆ ಬಿಟ್ಟಿದೆ.
ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ತಮ್ಮ ತಮ್ಮನ ಪರ ಬೆಂಗಳೂರು ಗ್ರಾಮಾಂತರವನ್ನು ಚನ್ನಪಟ್ಟಣ ಶಾಸಕ ಸಿಪಿ ಯೋಗೀಶ್ವರ್ ಅವರ ಕೈಗೊಪ್ಪಿಸಿ, ನವಶಕ್ತಿಯೊಂದಿಗೆ ಹಾಸನದತ್ತ ದಾಪುಗಾಲು ಹಾಕಿದ್ದಾರೆ. ಹಾಗಾಗಿ ಹಾಸನ ಚುನಾವಣೆ ಈ ಬಾರಿ ಭಾರಿ ಮಹತ್ವ ಪಡೆದುಕೊಂಡಿದ್ದು, ಕುತೂಹಲ ಕೆರಳಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದೇ ವೇಳೆ, ನಿರುತ್ಸಾಹಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಈಗ ನವಚೈತನ್ಯದಿಂದ ಪುಟಿಯುತ್ತಿದ್ದಾರೆ. ಆಕ್ರಮಣಕಾರಿ ನಾಯಕ ಡಿಕೆಶಿ ಪ್ರವೇಶ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ.

ಡಿಕೆಶಿ ವರ್ಸಸ್ ಗೌಡರ ಕುಟುಂಬದ ಪುರಾತನ ಕಾಳಗ
ನಿನ್ನೆಯಿಂದಲೇ ಹಾಸನದ ಚಾರ್ಜ್ ತೆಗೆದುಕೊಂಡಿರುವ ಡಿಕೆಶಿ ತಮ್ಮ ರಾಜಕೀಯ ಕಡುವೈರಿ ಗೌಡರ ಕುಟುಂಬದ ವಿರುದ್ಧ ಚಾರ್ಜ್ ಮಾಡಿದ್ದಾರೆ. ಡಿಕೆಶಿ ಅಧಿಪತ್ಯಕ್ಕೆ ಗೌಡರ ಕುಟುಂಬ ಅಡ್ಡಗಾಲು ಹಾಕುವುದು ಮತ್ತು ಗೌಡರ ಕುಟುಂಬದ ಅಧಿಪತ್ಯಕ್ಕೆ ಡಿಕೆಶಿ ಸೋದರರು ಟಾಂಗ್ ಕೊಡುವ ಸಂಪ್ರದಾಯ ಪುರಾತನವಾಗಿ ಬೆಳೆದುಬಂದಿದೆ. ಅದರ ಮುಂದುವರಿದ ಭಾಗವಾಗಿ ಈಗ ಹಾಸನ ಕಣ ರಂಗೇರಿದೆ. ಮೊದಲ ಏಟಿಗೆ, ಗೌಡರ ಕುಟುಂಬದ ಕಣ್ಣಿರಧಾರೆಗೆ ಕಟಕಿಯಾಡಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿಯತ್ತ ಕೈಚಾಚಿದ ಡಿಕೆಶಿ
ಇನ್ನು ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಒಕ್ಕಲಿಗರ ಸಮುದಾಯ ಪ್ರಬಲವಾಗಿದೆ. ಹಾಗಾಗಿ ಹಾಸನ ಡಿಕೆಶಿ ಹೆಗಲೇರಿದೆ. ಮೊದಲ ಪ್ರಯತ್ನವಾಗಿ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾರೆ. ಒಕ್ಕಲಿಗರ ಮತಗಳು ಡಿವೈಡ್ ಆದರೆ 3 ಲಕ್ಷದಷ್ಟಿರುವ ಲಿಂಗಾಯತರ ಮತಗಳು ಮತ್ತು 4 ಲಕ್ಷದಷ್ಟಿರುವ ದಲಿತ ಸಮುಜದಾಯದ ಮತಗಳು ನಿರ್ಣಾಯಕವಾಗಲಿವೆ. ಹಾಗಾಗಿ ಈ ಮತ ಬೇಟೆ ಭಾರಿ ಮಹತ್ವ ಪಡೆದುಕೊಳ್ಳಲಿದೆ.

ಅರಕಲಗೂಡು ಮಂಜು, ಸಿಎಂ ಸಿದ್ದರಾಮಯ್ಯ ಕ್ಯಾಂಡಿಡೇಟ್
ಅಂದಹಾಗೆ ಕಾಂಗ್ರೆಸ್ಸಿನಿಂದ ಎ. ಮಂಜು ಅವರು ಸ್ಪರ್ಧಿಸುತ್ತಿದ್ದಾರೆ. ಅರಕಲಗೂಡು ಮಂಜು ಅವರು ಸಿಎಂ ಸಿದ್ದರಾಮಯ್ಯ ಅವರ ಕ್ಯಾಂಡಿಡೇಟ್. ಜತೆಗೆ ಸಿದ್ದು, ದೊಡ್ಡಗೌಡರ ಕಡುವೈರಿ ಸಹ. ಹಾಗಾಗಿ, ಮುಖ್ಯಮಂತ್ರಿ ಸಿದ್ದು ಅವರೂ ಕ್ಷೇತ್ರದ ಮೇಲೆ ವಿಶೇಷ ಮುತುವರ್ಜಿ/ ಕಾಳಜಿ ವಹಿಸಿದ್ದಾರೆ. ಮಾರ್ಚ್ 29ರಂದು (ಶನಿವಾರ) ಹಾಸನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಭೆ ನಡೆಸಲಿದ್ದಾರೆ.

ಕೊನೆಗೆ ಗೌಡರದ್ದೇ ಮುಗುಳ್ನಗೆಯಾ?
ಇಷ್ಟೆಲ್ಲಾ ಬೆಳವಣಿಗೆ/ ವಿದ್ಯಮಾನಗಳ ಬಳಿಕ ಎಚ್ಚೆತ್ತಿರುವ ಜೆಡಿಎಸ್ ಶತಾಯಗತಾಯ ಮೇಲುಗೈ ಸಾಧಿಸಲು ರಣತಂತ್ರ ರೂಪಿಸುತ್ತಿದೆ. ಹಾಗಾಗಿ ಹಾಸನ ಮತಕ್ಷೇತ್ರ ರಂಗುರಂಗಾಗಿದೆ. ಮಧ್ಯೆ, ಬಿಜೆಪಿಯ 'ಒಲ್ಲದ ಅಭ್ಯರ್ಥಿ' ಸಿಎಚ್ ವಿಜಯಶಂಕರ್ ಅವರೇನು ಮಾಡುತ್ತಾರೆ ಎಂಬುದೂ ಇಂಟರೆಸ್ಟಿಂಗ್ ಆಗಿದೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ 6- ಕಾಂಗ್ರೆಸ್ 2
ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ:
1) ಕಡೂರು - ವೈಎಸ್ ವಿ ದತ್ತಾ (ಜೆಡಿಎಸ್)
2) ಶ್ರವಣಬೆಳಗೊಳ - ಸಿಎನ್ ಬಾಲಕೃಷ್ಣ (ಜೆಡಿಎಸ್)
3) ಅರಸೀಕೆರೆ - ಕೆ ಎಂ ಶಿವಲಿಂಗೇ ಗೌಡ (ಜೆಡಿಎಸ್)
4) ಬೇಲೂರು - ರುದ್ರೇಶ್ ಗೌಡ ವೈ ಎನ್ (ಕಾಂಗ್ರೆಸ್)
5) ಹಾಸನ - ಎಚ್ಎಸ್ ಪ್ರಕಾಶ್ (ಜೆಡಿಎಸ್)
6) ಹೊಳೆನರಸೀಪುರ - ಎಚ್ ಡಿ ರೇವಣ್ಣ (ಜೆಡಿಎಸ್)
7) ಅರಕಲಗೂಡು - ಮಂಜು (ಕಾಂಗ್ರೆಸ್)
8) ಸಕಲೇಶಪುರ - ಕುಮಾರಸ್ವಾಮಿ ಎಚ್ ಕೆ (ಜೆಡಿಎಸ್)












Click it and Unblock the Notifications