ಗೃಹ ಬಳಕೆಯ ಸಿಲಿಂಡರ್ ಉಚಿತ ಸರಬರಾಜು, ವಿವರಗಳು
ಬೆಂಗಳೂರು, ಜನವರಿ 28: ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್ ಸರಬರಾಜು ಮಾಡುವ ವಿಚಾರದಲ್ಲಿ ಮಹತ್ವದ ಅಪ್‌ಡೇಟ್ ಒಂದಿದೆ. ಗ್ಯಾಸ್ ಏಜೆನ್ಸಿಗಳು ಮನೆಗಳಿಗೆ ಸಿಲಿಂಡರ್ ಸರಬರಾಜು ಮಾಡುವಾಗ ಹೆಚ್ಚಿನ ದರವನ್ನು ವಿಧಿಸಬಾರದು, ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ಸರಬರಾಜು ಮಾಡಬೇಕು ಎಂಬ ನಿಯಮವಿದೆ ಎಂಬುದು ಈಗ ತಿಳಿದು ಬಂದಿದೆ.
ಎಲ್ಲಾ ಅನಿಲ ವಿತರಕರು, ಗೃಹ ಬಳಕೆಯ ಭರ್ತಿ ಮಾಡಿದ ಅನಿಲ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಸಾಗಾಣಿಕೆ ಮಾಡುವಾಗ 5 ಕಿ. ಮೀ. ಒಳಗೆ ಉಚಿತವಾಗಿ ಸರಬರಾಜು ಮಾಡಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಗಳ ಉಪ ನಿರ್ದೇಶಕ ಸಕೀನಾ ಹೇಳಿದ್ದಾರೆ.

5 ಕಿ. ಮೀ. ನಂತರದ ಪ್ರತಿ ಕಿ. ಮೀ. ರೌಂಡ್ ಟ್ರಿಪ್‌ಗೆ ಪ್ರತಿ ಸಿಲಿಂಡರ್‌ಗೆ 1.60 ರೂ. ತೆಗೆದುಕೊಳ್ಳಬೇಕು. ತಪ್ಪಿದ್ದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ 2000ರ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡುವಾಗ ಹಣವನ್ನು ವಸೂಲಿ ಮಾಡಲಾಗುತ್ತದೆ. ಅದರಲ್ಲೂ ನಗರ ಪ್ರದೇಶದಲ್ಲಿ ಮನೆಯ ಪ್ಲೋರ್ ಲೆಕ್ಕಕ್ಕೆ ಹಣವನ್ನು ನಿಗದಿ ಮಾಡಲಾಗಿದೆ. ಆದರೆ ಈಗ 5 ಕಿ. ಮೀ. ಒಳಗೆ ಉಚಿತವಾಗಿ ಸರಬರಾಜು ಮಾಡಬೇಕು ಎಂಬ ವಿಚಾರ ತಿಳಿದುಬಂದಿದೆ.
ತಪಾಸಣೆ ಕಡ್ಡಾಯ; ನಿಯಮಾವಳಿಗಳ ಪ್ರಕಾರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬರುವ ಎಲ್ಲಾ ಗೃಹ ಬಳಕೆ ಅನಿಲ ಸಿಲಿಂಡರ್ ಗ್ರಾಹಕರ ಮನೆಗಳಿಗೆ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಗೃಹ ಬಳಕೆ ಅನಿಲ ಸಿಲಿಂಡರ್ ಸಂಪರ್ಕವನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕಾಗಿರುತ್ತದೆ.
ಪಂಚವಾರ್ಷಿಕ ತಪಾಸಣೆಯನ್ನು ಗ್ರಾಹಕರ ಅನಿಲ ಸಿಲಿಂಡರ್ ಸಂಪರ್ಕದ ಸುರಕ್ಷತೆ ದೃಷ್ಠಿಯಿಂದ ಮಾಡಲಾಗುತ್ತದೆ. ಸುರಕ್ಷಿತ ಅನಿಲ ಸಿಲಿಂಡರ್ ಸಂಪರ್ಕಗಳಿಗೆ ಮಾತ್ರ ಸಿಲಿಂಡರ್ ಪೂರೈಕೆ ಮಾಡಲು ಕಂಪನಿಯಲ್ಲಿ ನಿಯಮಾವಳಿ ಇರುವುದರಿಂದ ಎಲ್ಲಾ ಗೃಹ ಬಳಕೆ ಅನಿಲ ಸಿಲಿಂಡರ್ ಗ್ರಾಹಕರು ಸಹಕರಿಸಿ ಈ ಪಂಚವಾರ್ಷಿಕ ತಪಾಸಣೆ ಸೌಲಭ್ಯವನ್ನು ತಪ್ಪದೇ ಉಪಯೋಗಿಸಿಕೊಳ್ಳಲು ಸೂಚಿಸಲಾಗಿದೆ.
ಸುರಕ್ಷಿತ ಅನಿಲ ಸಂಪರ್ಕಗಳಿಗೆ ಮಾತ್ರ ಅನಿಲ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಅಸುರಕ್ಷಿತ ಅನಿಲ ಸಿಲಿಂಡರ್ ಸಂಪರ್ಕಗಳಿಗೆ ಕಂಪನಿ ನಿಯಮಾವಳಿ ಪ್ರಕಾರ ಸಿಲಿಂಡರ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಗೃಹಬಳಕೆ ಅನಿಲ ಸಂಪರ್ಕಗಳನ್ನು ಪಂಚವಾರ್ಷಿಕ ತಪಾಸಣೆ ಕಾರ್ಯನಿರ್ವಹಿಸಲು ನುರಿತ ಸಿಬ್ಬಂದಿಯವರನ್ನು ಅಧಿಕೃತವಾಗಿ ನಿಯೋಜಿಸಲಾಗುತ್ತದೆ.
ಈ ತಪಾಸಣೆ ಸಿಬ್ಬಂದಿಯವರು ಪ್ರತಿ ಗೃಹಬಳಕೆ ಅನಿಲ ಸಿಲಿಂಡರ್ ಸಂಪರ್ಕದ ಮನೆಗಳಿಗೆ ಭೇಟಿ ನೀಡಿ ಅನಿಲ ಸಿಲಿಂಡರ್ ಬಳಕೆಯ ಸುರಕ್ಷತಾ ನಿಯಮಗಳ ಮಾಹಿತಿಯನ್ನು ನೀಡುತ್ತಾರೆ. ನಿಮ್ಮ ಅನಿಲ ಸಿಲಿಂಡರ್ ಸಂಪರ್ಕವು ಸುರಕ್ಷಿತ ಅಥವಾ ಅಸುರಕ್ಷಿತ ಎಂಬುವುದರ ಬಗ್ಗೆ ಚೆಕ್‌ಲಿಸ್ಟ್‌ನಲ್ಲಿ ವರದಿ ನೀಡುತ್ತಾರೆ.
ಸಿಬ್ಬಂದಿಗಳು ಗ್ರಾಹಕರ ಸ್ಟವ್ ಮತ್ತು ರಬ್ಬರ್ ಟ್ಯೂಬ್ ಪರಿಶೀಲಿಸಿ, ಗ್ಯಾಸ್ ಕಂಪನಿಯಿಂದ ನಿಷೇಧಿಸಲ್ಪಟ್ಟಿರುವ ಹಸಿರು ಬಣ್ಣದ ರಬ್ಬರ್‌ಟ್ಯೂಬ್ ಅಥವಾ ಪ್ಲಾಸ್ಟಿಕ್ ಟ್ಯೂಬ್‌ಗಳಿದ್ದಲ್ಲಿ ಅವುಗಳನ್ನು ಬದಲಾಯಿಸಿ ಕಂಪನಿಯಿಂದ ಶಿಫಾರಸ್ಸು ಮಾಡಿರುವ ಸುರಕ್ಷಾ ರಬ್ಬರ್ ಟ್ಯೂಬ್‌ಗಳನ್ನು ಅಳವಡಿಸಿ ಕೊಡುತ್ತಾರೆ.
ಗ್ರಾಹಕರ ಸ್ಟವ್ ದುರಸ್ಥಿ ಇದ್ದಲ್ಲಿ ಗ್ರಾಹಕರು ಒಪ್ಪಿಗೆ ಸೂಚಿಸಿದಲ್ಲಿ ಸ್ಟವ್ ದುರಸ್ಥಿ ಮಾಡಿಕೊಡುತ್ತಾರೆ. ಈ ಬಗ್ಗೆ ತಪಾಸಣಾ ಸಿಬ್ಬಂದಿಯವರಿಗೆ ಗುರುತಿನ ಚೀಟಿಯನ್ನು ನೀಡಲಾಗಿರುತ್ತದೆ.












Click it and Unblock the Notifications