ಕರ್ನಾಟಕದಲ್ಲಿ ಚುನಾವಣೆಗೆ ಪಕ್ಷಗಳ ಸಿದ್ಧತೆ ಎಷ್ಟು?
ಬೆಂಗಳೂರು, ಮಾ. 14 : ಕರ್ನಾಟಕ ಲೋಕಸಭೆ ಚುನಾವಣೆಯ ಸ್ಪರ್ಧಾ ಕಣದ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗತೊಡಗಿದೆ. ಜೆಡಿಎಸ್ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೆ, ಆಮ್ ಆದ್ಮಿ ಪಕ್ಷ 13 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಬಿಜೆಪಿ 3 ಮತ್ತು ಕಾಂಗ್ರೆಸ್ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಬೇಕಾಗಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಕ್ಷ ಚುನಾವಣೆಗಾಗಿ ತಯಾರಿ ಆರಂಭಿಸಿದ್ದರೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದೆ. 12 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಯನ್ನು ಘೋಷಿಸಿದ್ದು, ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಕಾಂಗ್ರೆಸ್ : ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈಗಾಗಲೇ 24 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಆದರೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆದ್ದರಿಂದ 3 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ. [ಕಾಂಗ್ರೆಸ್ 2ನೇ ಪಟ್ಟಿ ರಿಲೀಸ್]
ಕಾಂಗ್ರೆಸ್ ಹಾವೇರಿ, ಧಾರವಾಡ, ಉತ್ತರ ಕನ್ನಡ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಅಭ್ಯರ್ಥಿ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಿ ನಾರಾಯಣ ಸ್ವಾಮಿ ಜಯಗಳಿಸಿದ್ದು, ಎಐಸಿಸಿ ಈ ಕುರಿತು ಅಧಿಕೃತವಾಗಿ ಘೋಷಿಸಬೇಕಾಗಿದೆ. ಆದ್ದರಿಂದ 3 ಕ್ಷೇತ್ರದ ಘೋಷಣೆ ಬಾಕಿ ಉಳಿದಿದೆ.
ಬಿಜೆಪಿ : ಮೋದಿ ಅಲೆಯ ಉತ್ಸಾಹದಲ್ಲಿ ತೇಲುತ್ತಿರುವ ಬಿಜೆಪಿ ಕರ್ನಾಟಕದ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಕೇವಲ 3 ಕ್ಷೇತ್ರಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಬಾಕಿ ಉಳಿದಿರುವ ಬೀದರ್, ಬಳ್ಳಾರಿ ಮತ್ತು ಹಾಸನ ಕ್ಷೇತ್ರಗಳಿಗೆ ಎರಡು ಮೂರು ದಿನದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲು ಸಿದ್ಧತೆ ನಡೆಸಿದೆ. [ಬಿಜೆಪಿ 2ನೇ ಪಟ್ಟಿ ನೋಡಿ]
ಜೆಡಿಎಸ್ : 12 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ತನ್ನದೇ ಲೆಕ್ಕಾಚಾರದಲ್ಲಿ ಮುಳುಗಿದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ದೊರೆಯದ ಅತೃಪ್ತರು ಪಕ್ಷಕ್ಕೆ ಆಗಮಿಸಿದರೆ, ಅವರಿಗೆ ಟಕೆಟ್ ನೀಡಬಹುದು ಎಂದು ಕಾದು ನೋಡುವ ತಂತ್ರ ಅನುಸರಿಸಿದೆ. ಆದ್ದರಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ವಿಳಂಬ ಧೋರಣೆ ಅನುಸರಿಸುತ್ತಿದೆ. [ಜೆಡಿಎಸ್ ಪಟ್ಟಿ ನೋಡಿ]
ಆಮ್ ಆದ್ಮಿ ಪಕ್ಷ : ಮೊದಲ ಬಾರಿ ಲೋಕಸಭೆ ಚುನಾವಣೆ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿಯೂ ಭರ್ಜರಿ ಸಿದ್ಧತೆ ಆರಂಭಿಸಿದೆ. 13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಶನಿವಾರ ಮತ್ತು ಭಾನುವಾರ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಅವರು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. [ಆಮ್ ಆದ್ಮಿ ಅಭ್ಯರ್ಥಿಗಳ ಪರಿಚಯ]












Click it and Unblock the Notifications