ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್- ಯಾವ ಕ್ಷೇತ್ರದಲ್ಲಿ ಯಾರಿಗೆ ಸಿಗಲಿದೆ ಚಾನ್ಸ್ ?
ಬೆಂಗಳೂರು, ಮಾರ್ಚ್ 22: ಕಾಂಗ್ರೆಸ್ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದ 17 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಏಳು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿತ್ತು. ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಯ ಆಯ್ಕೆ ದೊಡ್ಡ ಸವಾಲ್ ಆಗಿದೆ.
ಕರ್ನಾಡಕ 28 ಕ್ಷೇತ್ರಗಳ ಫೈಕಿ ಯಾವುದೇ ಗೊಂದಲಗಳಿಲ್ಲ ಏಳು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿತ್ತು. ಇದೀಗ ಗುರುವಾರ ಬಿಡುಗಡೆಯಾದ ಮೂರನೇ ಪಟ್ಟಿಯಲ್ಲಿ 17 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದೆ. ಒಟ್ಟಾರೆ 28 ಕ್ಷೇತ್ರಗಳ ಫೈಕಿ 24 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ನಾಲ್ಕು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ತಲೆನೋವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದು, ಇಂದು ಅಂತಿಮವಾಗಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಯುವ ನಾಯಕ ರಕ್ಷಾ ರಾಮಯ್ಯ, ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿ ಅವರು ಸಹ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ. ಈ ಮೂವರು ನಾಯಕರು ಚಿಕ್ಕಬಳ್ಳಾಪುರ ಟಿಕೆಟ್ ಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮೂಲಕವೂ ಮೂವರು ನಾಯಕರು ಟಿಕೆಟ್ ಗಾಗಿ ಒತ್ತಡ ಹಾಕಿದ್ದಾರೆ. ಈ ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಸಹ ಟಿಕೆಟ್ ಕಳೆದುಕೊಂಡವರಿಂದ ಬಂಡಾಯದ ಬಿಸಿ ತಟ್ಟುತ್ತದೆ ಎಂದು ಕಾಂಗ್ರೆಸ್ ಸದ್ಯಕ್ಕೆ ಈ ಕ್ಷೇತ್ರದಲ್ಲಿ ಟಿಕೆಟ್ ಘೋಷಿಸಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಯುವ ನಾಯಕರಾದ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ನಾಯಕರು ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಚಿಕ್ಕಪೆದ್ದಣ್ಣ ಹಾಗೂ ಎಲ್.ಹನುಮಂತಯ್ಯ ಅವರು ಟಿಕೆಟ್ ಲಾಬಿ ನಡೆಸಿದ್ದು, ಎಲ್.ಹನುಮಂತಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆ ಇದೆ. ಇತ್ತ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಹೆಚ್ ಮಹಾದೇವಪ್ಪ ಅವರಿಗೆ ಸ್ಪರ್ಧಿದುವಂತೆ ಹೈಕಮಾಂಡ್ ಹೇಳಿತ್ತು.ಆದರೆ, ಮಹಾದೇವಪ್ಪ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿರಾಸಕ್ತಿ ತೋರಿದ್ದು, ಸುನೀಲ್ ಬೋಸ್ ಹಾಗೂ ದರ್ಶನ್ ಧ್ರುವ ನಾರಾಯಣ ಅವರ ಹೆಸರು ಕೇಳಿ ಬರುತ್ತಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಬಿಜೆಪಿಯಿಂದ ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.ಇತ್ತ ಕಾಂಗ್ರೆಸ್ ನಿಂದ ತುಕಾರಾಂ ಅವರ ಪುತ್ರಿ ಸೌಪರ್ಣಿಕಾ ತುಕಾರಾಂ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇತ್ತ ಬಳ್ಳಾರಿ ಟಿಕೆಟ್ ಗಾಗಿ ತೀವ್ರ ಫೈಪೋಟಿ ಹೆಚ್ಚಾಗಿದ್ದು, ವೆಂಕಟೇಶ್ ಪ್ರಸಾದ್, ವಿ.ಎಸ್. ಉಗ್ರಪ್ಪ ಅವರ ಹೆಸರು ಕೇಳಿ ಬರುತ್ತಿದ್ದು, ತುಕಾರಾಂ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದೆ.
ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
1.ಬಾಗಲಕೋಟೆ ಲೋಕಸಭಾ ಕ್ಷೇತ್ರ-ಸಂಯುಕ್ತಾ ಪಾಟೀಲ್
2.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ಸೌಮ್ಯಾರೆಡ್ಡಿ
3.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಎಂ.ವಿ.ರಾಜೀವ್ ಗೌಡ
4.ಮೈಸೂರು ಲೋಕಸಭಾ ಕ್ಷೇತ್ರ-ಎಂ.ಲಕ್ಷ್ಮಣ್
5.ಚಿತ್ರದುರ್ಗ ಲೋಕಸಭಾ ಕ್ಷೇತ್ರ-ಬಿ.ಎನ್.ಚಂದ್ರಪ್ಪ
6.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಪದ್ಮರಾಜ್
7.ಉಡುಪಿ, ಚಿಕ್ಕಮಗಳೂರು ಕ್ಷೇತ್ರ-ಜಯಪ್ರಕಾಶ್ ಹೆಗ್ಡೆ
8.ಕಲಬುರಗಿ ಲೋಕಸಭಾ ಕ್ಷೇತ್ರ-ರಾಧಾಕೃಷ್ಣ ದೊಡ್ಡಮನಿ
9.ದಾವಣಗೆರೆ ಲೋಕಸಭಾ ಕ್ಷೇತ್ರ-ಪ್ರಭಾ ಮಲ್ಲಿಕಾರ್ಜುನ
10.ಬೆಂಗಳೂರು ಸೆಂಟ್ರಲ್ ಕ್ಷೇತ್ರ-ಮನ್ಸೂರ್ ಅಲಿಖಾನ್
11.ಉತ್ತರ ಕನ್ನಡ ಕ್ಷೇತ್ರ-ಡಾ.ಅಂಜಲಿ ನಿಂಬಾಳ್ಕರ್
12.ಧಾರವಾಡ ಲೋಕಸಭಾ ಕ್ಷೇತ್ರ-ವಿನೋದ್ ಅಸೋಟಿ
13.ಕೊಪ್ಪಳ ಲೋಕಸಭಾ ಕ್ಷೇತ್ರ-ರಾಜಶೇಖರ್ ಹಿಟ್ನಾಳ್
14.ಬೀದರ್ ಲೋಕಸಭಾ ಕ್ಷೇತ್ರ-ಸಾಗರ್ ಖಂಡ್ರೆ
15.ರಾಯಚೂರು ಲೋಕಸಭಾ ಕ್ಷೇತ್ರ-ಕುಮಾರ್ ಜಿ ನಾಯಕ್
16.ಬೆಳಗಾವಿ ಲೋಕಸಭಾ ಕ್ಷೇತ್ರ-ಮೃಣಾಲ್ ಹೆಬ್ಬಾಳ್ಕರ್
17. ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಪ್ರಿಯಾಂಕಾ ಜಾರಕಿಹೊಳಿ












Click it and Unblock the Notifications