Senior citizen Vote: ಹಿರಿಯ ನಾಗರಿಕರೇ ಮತದಾನ ಮಾಡಲು ಸಿದ್ಧರಾಗಿ.... ನಾಳೆಯಿಂದ ಮನೆಗೆ ತೆರಳಿ ಮತದಾನ ಮಾಡಿಸುವ ಅಧಿಕಾರಿಗಳು
ಬೆಂಗಳೂರು ಏಪ್ರಿಲ್ 12: ಹಿರಿಯ ನಾಗರಿಕರೇ ಮತದಾನ ಮಾಡಲು ಸಿದ್ಧರಾಗಿ. ಯಾಕೆಂದರೆ ನಾಳೆಯಿಂದ ಮನೆ ಮನೆಗೆ ತೆರಳಿ ಅಧಿಕಾರಿಗಳು ಮತದಾನ ಮಾಡಿಸುತ್ತಿದ್ದಾರೆ. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಆರು ದಿನ ಮನೆಯಿಂದ ಅಂಚೆ ಮತದಾನ ಕೈಗೊಳ್ಳಲಾಗುವುದು.
6,372 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಮನೆಯಿಂದ ಮತದಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 13ರಿಂದ 18ರವರೆಗೆ ಮನೆಯಿಂದ ಅಂಚೆ ಮತದಾನ ನಡೆಯಲಿದ್ದು, ಹಿರಿಯ ನಾಗರಿಕರು ಅಂಗವಿಕಲರು ಮತದಾನ ಮಾಡಲಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಮತದಾನ ಮಾಡಲಿದ್ದಾರೆ.

ಅಧಿಕಾರಿಗಳ ತಂಡ ಅರ್ಜಿ ಸಲ್ಲಿಕೆ ಮಾಡಿದ ಪ್ರತಿ ಮತದಾರರ ಮನೆಗೆ ತೆರಳಿ ಮತದಾರರಿಂದ ಅಂಚೆ ಮತದಾನ ಪಡೆಯಲಿದ್ದಾರೆ. ಯಾವ ದಿನ ಮತದಾರರ ಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂಬುದರ ಬಗ್ಗೆ ಮೊದಲೇ ಮಾಹಿತಿಯನ್ನು ಒದಗಿಸಲಾಗುತ್ತದೆ.
ನಗರದಲ್ಲಿ ಒಟ್ಟು 95,128 ಹಿರಿಯ ನಾಗರಿಕರು ಹಾಗೂ 22,222 ಅಂಗವಿಕಲರು ಸೇರಿದಂತೆ ಒಟ್ಟು 1,17,350 ಮತದಾರರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅರ್ಹತೆ ಹೊಂದಿದ್ದಾರೆ. ಈ ಪೈಕಿ ಕೇವಲ 6,128 ಹಿರಿಯ ನಾಗರಿಕರು, 191 ಅಂಗವಿಕಲರು ಸೇರಿದಂತೆ ಒಟ್ಟು 6,372 ಮಂದಿ 12ಡಿ ಅರ್ಜಿ ಸಲ್ಲಿಕೆ ಮಾಡಿ ಮನೆಯಿಂದ ಅಂಚೆ ಮತದಾನ ಮಾಡುವುದಾಗಿ ತಿಳಿಸಿದ್ದಾರೆ.
ಮನೆಯಿಂದ ಅಂಚೆ ಮತದಾನ ಮಾಡುವುದಕ್ಕೆ 12ಡಿ ಅರ್ಜಿ ಸಲ್ಲಿಕೆ ಮಾಡಿದ ಮತದಾರರು ನಿಗದಿತ ದಿನಾಂಕದಲ್ಲಿ ಮನೆಯಿಂದಲೇ ಅಂಚೆ ಮತದಾನ ಮಾಡಬೇಕು. ಒಂದು ವೇಳೆ ಮನೆಯಿಂದ ಅಂಚೆ ಮತದಾನ ಸಾಧ್ಯವಾಗಿಲ್ಲ ಎಂದು ಸಾರ್ವತ್ರಿಕ ಮತದಾನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.
ಹೌದು.... ಅಂಚೆ ಮತದಾನಕ್ಕೆ ನೋಂದಾಯಿಸಿರುವವರು ಮನೆಯಲ್ಲೇ ಮತ ಹಾಕಬೇಕು. ಅಲ್ಲಿ ಮತದಾನ, ಮಾಡಿಲ್ಲ ಎಂದು ಮತಗಟ್ಟೆಯಲ್ಲಿ ಮತ ಹಾಕಲು ಕೋರಿದರೆ ಅವಕಾಶ ಸಿಗುವುದಿಲ್ಲ. ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲೆ ಅಧಿಕಾರಿಗಳು ಸರಿಯಾಗಿ ನಿಗಾ ವಹಿಸಬೇಕೆಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಮಕ್ರಂದ್ ಪಾಂಡುರಂಗ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕುಮಾರ ಕೃಪಾ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ಮೇಲೆ ಎಫ್‌ಎಸ್‌ಸಿ ತಂಡಗಳು ಸರಿಯಾಗಿ ನಿಗಾವಹಿಸುತ್ತಿರಬೇಕು. ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಡೆಯುವ ಸಮಾವೇಶಗಳು, ಪ್ರಚಾರ ಕಾರ್ಯಗಳ ವೇಳೆ ವಿವಿಟಿ, ವಿಡಸ್‌ಟಿ ಹಾಗೂ ಎಸ್‌ಎಸ್‌ಟಿ ತಂಡಗಳು ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು. ಚುನಾವಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಸುಗಮವಾಗಿ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.












Click it and Unblock the Notifications