ಮೊಹಮ್ಮದ್ ಶಮಿ ಬಿಜೆಪಿಗೆ ಭರ್ಜರಿ ಎಂಟ್ರಿ, ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ?
2023ರ ಕ್ರಿಕೆಟ್ ವರ್ಲ್ಡ್ ಕಪ್ ಅಖಾಡದಲ್ಲಿ ಫಾರಿನ್ ಬ್ಯಾಟ್ಸ್‌ಮನ್‌ಗಳ ಬೆವರು ಇಳಿಸಿದ್ದ, ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಹೊಸ ಇನ್ನಿಂಗ್ಸ್ ಶುರು ಮಾಡುವ ಲಕ್ಷಣ ಕಾಣುತ್ತಿದೆ. ಆದ್ರೆ ಹೀಗೆ ಮೊಹಮ್ಮದ್ ಶಮಿ ಹೊಸ ಇನ್ನಿಂಗ್ಸ್ ಆರಂಭ ಮಾಡುತ್ತಿರುವುದು ಕ್ರಿಕೆಟ್ ಮೈದಾನದಲ್ಲಿ ಅಲ್ಲ, ಬದಲಾಗಿ ರಾಜಕೀಯ ಅಖಾಡದಲ್ಲಿ! ಹೌದು ಮೊಹಮ್ಮದ್ ಶಮಿ ಅವರು, ಬಿಜೆಪಿಗೆ ಸೇರಿ ಲೋಕಸಭೆ ಚುನಾವಣೆಗೂ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ವರದಿ ಹಲ್‌ಚಲ್ ಎಬ್ಬಿಸಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಹ್ಯಾಟ್ರಿಕ್ ಬಾರಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಎನ್‌ಡಿಎ ಸಜ್ಜಾಗಿದೆ. ಅದ್ರಲ್ಲೂ ಈ ಬಾರಿ ಕನಿಷ್ಠ 400 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌ನ ಮಾಡಿದೆ. ಹೀಗಾಗಿಯೇ ಇಡೀ ದೇಶದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಜೆಪಿ ವರಿಷ್ಠರು ಭರ್ಜರಿ ರಣತಂತ್ರ ಅನುಸರಿಸುತ್ತಿದ್ದಾರೆ. ಅದೇ ರೀತಿ ಮಮತಾ ಬ್ಯಾನರ್ಜಿ ಅವರ ಪಶ್ಚಿಮ ಬಂಗಾಳದಲ್ಲಿ ಕೂಡ ಬಿಜೆಪಿ ಅದ್ಧೂರಿ ಗೆಲುವು ಸಾಧಿಸಲು ಹೊಸ ಹೊಸ ತಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಮೊಹಮ್ಮದ್ ಶಮಿ ಅವರನ್ನು ಕೂಡ ಲೋಕಸಭೆ ಚುನಾವಣೆಗೆ, ಪಶ್ಚಿಮ ಬಂಗಾಳದಿಂದ ಅಖಾಡಕ್ಕೆ ಇಳಿಸಲು ಪ್ಲಾನ್ ಆಗಿದೆಯಂತೆ. ಅರೆರೆ ಇದು ನಿಜಾನಾ? ಮುಂದೆ ಓದಿ.

ಮೊಹಮ್ಮದ್ ಶಮಿ ಲೆಕ್ಕಾಚಾರ ಏನು?
ಅಂದಹಾಗೆ ಕ್ರಿಕೆಟ್ ಅಖಾಡದಲ್ಲಿ ಮೊಹಮ್ಮದ್ ಶಮಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗೆ ತಮ್ಮ ಬೌಲಿಂಗ್ ದಾಳಿ ಮೂಲಕ ಕ್ರಿಕೆಟ್ ಅಖಾಡದಲ್ಲಿ ಹವಾ ಎಬ್ಬಿಸಿದಂತೆ, ರಾಜಕೀಯ ಅಖಾಡದಲ್ಲೂ ಸದ್ದು ಮಾಡುತ್ತಾರೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ ಎನ್ನಲಾಗಿದೆ. ಅದರಲ್ಲೂ ಬಿಜೆಪಿಗೆ ದೊಡ್ಡ ಸವಾಲಾಗಿರುವ ಮಮತಾ ಬ್ಯಾನರ್ಜಿಯನ್ನ ಇದೀಗ, ಪಶ್ಚಿಮ ಬಂಗಾಳದಲ್ಲಿ ಕಟ್ಟಿ ಹಾಕಲು ಬಿಜೆಪಿ ವರಿಷ್ಠರು ಸಕಲ ಸಿದ್ಧತೆ ನಡೆಸಿದ್ದಾರೆ. ಇದರ ಹೊಸ ಹೆಜ್ಜೆ ಎನ್ನವಂತೆ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಶಮಿ ಅವರನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಣಕ್ಕಿಳಿಸಲು ತಂತ್ರ ರೂಪಿಸಲಾಗಿದೆಯಂತೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಗಾಯದ ನಡುವೆ ಶಮಿ ರಾಜಕೀಯಕ್ಕೆ?
2023 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಆಟ ನೋಡಿದ ಇಡೀ ಜಗತ್ತು ವಾವ್, ವಾವ್ ಎಂದಿತ್ತು. ಅದರಲ್ಲೂ ಭಾರತ ತಂಡ ಫೈನಲ್‌ಗೆ ಎಂಟ್ರಿ ಕೊಡುವಲ್ಲಿ ಶಮಿ ಪಾತ್ರ ಕೂಡ ದೊಡ್ಡದಾಗಿತ್ತು. ಆದರೆ ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಶಮಿ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿಯೆ ಯಾವುದೇ ಮಾದರಿಯ ಪಂದ್ಯ ಆಡಿಲ್ಲ. ಕೆಲವೇ ತಿಂಗಳಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ 20 ಟೂರ್ನಿಯಲ್ಲಿ ಕೂಡ ಶಮಿ ಈಗ ಆಡಲ್ಲ ಎನ್ನಲಾಗುತ್ತಿದೆ. ಹೀಗಾಗಿ ಶಮಿ ಅವರು ಬಿಜೆಪಿಗೆ ಸೇರಿ, ಚುನಾವಣೆಗೂ ಸ್ಪರ್ಧೆ ಮಾಡ್ತಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ.
ಶಮಿ ಎಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ?
ಈಗಿನ ಲೆಕ್ಕಾಚಾರದ ಪ್ರಕಾರ ಅಕಸ್ಮಾತ್ ಮೊಹಮ್ಮದ್ ಶಮಿ ಬಿಜೆಪಿಗೆ ಸೇರ್ಪಡೆಗೊಂಡು, ಚುನಾವಣೆಗೆ ನಿಂತರೆ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ. ಇನ್ನು ಲೋಕಸಭೆ ಚುನಾವಣೆಯ ಅಖಾಡದಲ್ಲಿ ಬಂಗಾಳದ ಒಂದು ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮೊಹಮ್ಮದ್ ಶಮಿ ಅವರ ಹೆಸರನ್ನು ಸೂಚಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಇದೀಗ ರಾಷ್ಟೀಯ ಮಾಧ್ಯಮಗಳು ವರದಿ ಕೂಡ ಮಾಡಿವೆ. ಮೊಹಮ್ಮದ್ ಶಮಿ ಜೊತೆಗೆ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದು, ಈ ಚರ್ಚೆಗೆ ಈಗ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ನಾಯಕರೇ ಆಗಲಿ ಅಥವಾ ಮೊಹಮ್ಮದ್ ಶಮಿ ಆಗಲಿ ಯಾವುದೇ ಅಧಿಕೃತ ಹೇಳಿಕೆ ನಿಡಿಲ್ಲ. ಹೀಗಾಗಿ ಈಗ, ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.












Click it and Unblock the Notifications