ಲೋಕಸಭೆ ಚುನಾವಣಾ ಸಮೀಕ್ಷೆ: ಯಾವ ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು? ಅಭ್ಯರ್ಥಿಗಳ ಮಾಹಿತಿ
ಬೆಂಗಳೂರು, ಮಾರ್ಚ್ 05: ಲೋಕಸಭೆ ಚುನಾವಣೆ 2024ಕ್ಕೆ ರಾಜಕೀಯ ಪಕ್ಷಗಳು ಭರ್ಜರಿಯಾಗಿ ಸಿದ್ಧವಾಗುತ್ತಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ವಂತವಾಗಿ 370 ಸ್ಥಾನಗಳನ್ನು ಮತ್ತು ಎನ್‌ಡಿಎ ಮೈತ್ರಿಕೂಟದಿಂದ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಉತ್ತರದ ರಾಜ್ಯಗಳಲ್ಲಿ ಗಟ್ಟಿ ಹಿಡಿತವನ್ನು ಪಡೆದಿದೆ. ಆದರೆ, ದಕ್ಷಿಣ ಭಾಗದಲ್ಲಿ ಚುನಾವಣಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪಕ್ಷವು ಹೆಣಗಾಡುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣದಲ್ಲಿ ಬಿಜೆಪಿಗೆ ಭದ್ರ ಬುನಾದಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿಗೆ ಭದ್ರಬುನಾದಿ ಹಾಕಿಕೊಟ್ಟಿತ್ತು.

NDA ಮತ್ತು I.N.D.I.A ಮೈತ್ರಿಕೂಟಗಳು ದೇಶದಲ್ಲಿ ಎಷ್ಟು ಸ್ಥಾನಗಳನ್ನು ಪಡೆಯುತ್ತವೆ ಎಂಬುದನ್ನು ತಿಳಿಯಲು ಈಗಾಗಲೇ ಹಲವು ಸಮೀಕ್ಷೆಗಳು ನಡೆಯುತ್ತಿವೆ. ಇದರ ಜೊತೆಗೆ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಕ್ಷ (ಬಿಜೆಪಿ) 22 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಹಾಗಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಲಿರುವ ಕ್ಷೇತ್ರಗಳು ಯಾವುದು ಎಂದು ನೋಡುವುದಾದರೆ, ಅವು ಚಾಮರಾಜನಗರ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಕಲಬುರಗಿ ಕ್ಷೇತ್ರ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಮಾಹಿತಿ ಹೊರಹಾಕಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರ
ರಾಜ್ಯದ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ವರದಿ ಹೇಳಿದೆ. ಹಾಲಿ ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ ಈಗಾಗಲೇ ನಾನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಜಗ್ಗಾಟ ನಡೆಯುತ್ತಿದೆ. ಇದೆ ಬೆನ್ನಲ್ಲೇ ಕಾಂಗ್ರೆಸ್ ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತಿದೆ.

ಕಾಂಗ್ರೆಸ್‌ನಿಂದ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಥವಾ ಅವರ ಪುತ್ರ ಸುನೀಲ್ ಬೋಸ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈವರೆಗೂ ಇನ್ನು ಟಿಕೆಟ್ ಘೋಷಣೆಯಾಗಿಲ್ಲ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಬಹಿರಂಗಪಡಿಸಿದೆ. ಕ್ಷೇತ್ರದ ಹಾಲಿ ಸಂಸದ ಡಿ. ಕೆ. ಸುರೇಶ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೈಯಲ್ಲಿ ಇರುವುದು ಇದೊಂದೆ ಕ್ಷೇತ್ರ.
ಕಲಬುರಗಿ ಲೋಕಸಭಾ ಕ್ಷೇತ್ರ
ಕಲಬುರಗಿ (ಗುಲ್ಬರ್ಗಾ) ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯಗಳಿಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ವರದಿ ಮಾಡಿದೆ. ಇಲ್ಲಿ ಹಾಲಿ ಸಂಸದ ಬಿಜೆಪಿಯ ಉಮೇಶ್ ಜಾದವ್ ಇದ್ದಾರೆ. ಕಲಬುರಗಿಯಿಂದ ಈ ಬಾರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಚುನಾವಣೆಗೆ ನಿಲ್ಲುವುದಿಲ್ಲ ಹೀಗಾಗಿ, ಅಲ್ಲಿ ಅವರ ಬೆಂಬಲಿಗರಿಗೆ ಟಿಕೆಟ್ ಕೊಡಬಹುದು ಎಂದು ವದಂತಿಗಳಿವೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿಯೂ ಈ ಬಾರಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಜನ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗಪಡಿಸಿದೆ. ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಈ ಬಾರಿಯೂ ಬಿಜೆಪಿ ಟಿಕೆಟ್ ಸಿಗುವುದು ಖಚಿತವಾಗಿದೆ. ಆದರೆ, ಅಂತಹ ಪ್ರಚಾರ ಕಂಡುಬರುತ್ತಿಲ್ಲ. ಕಾಂಗ್ರೆಸ್‌ನಿಂದ ಈ ಬಾರಿ ಮಾಜಿ ಶಾಸಕ ವಿವೇಕ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾಹಿತಿಯಿದೆ.












Click it and Unblock the Notifications