Lok Poll Survey: ಕರ್ನಾಟಕ ಬಿಜೆಪಿಗೆ ಆಘಾತ ನೀಡಿದ ಲೋಕ್‌ಪೋಲ್ ಸಮೀಕ್ಷೆ; ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳೆಷ್ಟು?
ಕರ್ನಾಟಕ ಲೋಕಸಭಾ ಸಮರ ರಂಗೇರುತ್ತಿದೆ. 2019ರ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲು ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 28 ಕ್ಷೇತ್ರಗಳಲ್ಲೂ ಗೆಲ್ಲುವ ಕನಸು ಕಾಣುತ್ತಿದೆ.
ಹಲವು ಸಮೀಕ್ಷೆಗಳು ಒಂದೊಂದು ಪಕ್ಷದ ಪರವಾಗಿ ಬಂದಿವೆ. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆಯುವುದಂತೂ ಖಂಡಿತ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆಯಲ್ಲಿ ನಿಖರ ಅಂಕಿ ಅಂಶ ನೀಡಿದ್ದ ಲೋಕ್ ಪೋಲ್ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನಗಳನ್ನು ಗೆಲ್ಲುತ್ತವೆ ಎನ್ನುವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.

ಲೋಕ್ ಪೋಲ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 15-17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ 11-13 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳಿವೆ.
ಬಿಜೆಪಿಗೆ ಆಘಾತ ಕೊಟ್ಟ ಸಮೀಕ್ಷೆ
ಕಾಂಗ್ರೆಸ್ 15-17 ಸ್ಥಾನಗಳನ್ನು ಗೆಲ್ಲುವುದಾಗಿ ಸಮೀಕ್ಷೆ ಹೇಳಿದ್ದು, ಇದು ಬಿಜೆಪಿಗೆ ದೊಡ್ಡ ಆಘಾತವಾಗಿದೆ. ಮೋದಿ ಹೆಸರಿನಲ್ಲಿ ಮತ್ತೊಮ್ಮೆ ಸುಲಭ ಗೆಲುವಿನ ಕನಸು ಕಾಣುತ್ತಿರುವ ಹಲವು ಅಭ್ಯರ್ಥಿಗಳಿಗೆ ಸಮೀಕ್ಷೆ ಆಘಾತ ಕೊಟ್ಟಿದೆ.
ಕಾಂಗ್ರೆಸ್‌ಗೆ ಈ ಸಮೀಕ್ಷೆ ಸಂಪೂರ್ಣ ಸಂತೋಷ ನೀಡದೇ ಇದ್ದರೂ, ಒಂದು ಹಂತಕ್ಕೆ ಸಮಾಧಾನ ತಂದಿದೆ. ಸಿಎಂ ಸಿದ್ದರಾಮಯ್ಯ ಕೂಡ ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
Here are our final figures for the state of #Karnataka
— Lok Poll (@LokPoll) April 13, 2024
▪️BJP 11 - 13
▪️INC 15 - 17
Sample size: 1,350 per Parliamentary constituency.
Just recalling our Karnataka assembly elections survey that was incredibly spot on. :)#LoksabhaElections2024 #Elections2024… pic.twitter.com/xofRxWpntj
ಆದರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಇದು ಆಘಾತಕಾರಿ ವಿಷಯವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ 26 ರಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು, ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು, ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ಮತ್ತು ಮೇ 7ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿದೆ, 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದರೆ, 3 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.
ಈ ಬಾರಿ 400 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಗೆ ಸಮೀಕ್ಷೆಗಳು ಆತಂಕ ಮೂಡಿಸಿವೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮಕಾಡೆ ಮಲಗಿತ್ತು. ಈಗಲೂ ಬಿಜೆಪಿ ಕರ್ನಾಟದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ, ಮತದಾರನ ಒಲವು ಯಾರ ಕಡೆಗೆ ಇದೆ ಎನ್ನುವುದು ಜೂನ್ 4 ರಂದು ತಿಳಿಯಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಮತ ಕೇಳುತ್ತಿದ್ದು, ಮೋದಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಪ್ರಚಾರ ಮಾಡುತ್ತಿದೆ.












Click it and Unblock the Notifications