Karnataka Weather: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ವಾರ ಮತ್ತೆ ಮಳೆ
ಬೆಂಗಳೂರು, ಅಕ್ಟೋಬರ್ 26: ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎರಡು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೂರು ದಿನಗಳಿಂದ ಮಳೆ ಬಿಡುವು ಕೊಟ್ಟಿದೆ. ಮಳೆ ಕಡಿಮೆಯಾದರೆ ಸಾಕು ಎಂದು ಜನರು ಸಹ ಪ್ರಾರ್ಥಿಸುತ್ತಿದ್ದಾರೆ. ಮುಂದಿನ ವಾರ ಜನರು ದೀಪಾವಳಿ ಹಬ್ಬವನ್ನು ಆಚರಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಮತ್ತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ವಾರದ ರಾಜ್ಯದ ಹವಾಮಾನ ಮುನ್ಸೂಚನೆಯ ಮಾಹಿತಿ ನೀಡಿದೆ. ಕಳೆದ ಎರಡು ವಾರದಂತೆ ರಾಜ್ಯದದಲ್ಲಿ ಮಳೆ ಅಬ್ಬರಿಸದಿದ್ದರೂ ಸಹ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಶನಿವಾರ ಹವಾಮಾನ ಮತ್ತೆ ಬದಲಾಗಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಯಾವಾಗ ಮಳೆ ಸುರಿಯಲಿದೆಯೋ? ಎಂದು ಜನರು ಆಕಾಶ ನೋಡವಂತೆ ಆಗಿದೆ.

ಹವಾಮಾನ ಮುನ್ಸೂಚನೆ ಏನು?; ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ ಮುಂದಿನ 2 ದಿನಗಳ ಕಾಲ ರಾಜ್ಯದ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಇರುವುದಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಒಣ ಹವಾಮಾನದ ಸಾಧ್ಯತೆ ಇದೆ, ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಭಾರೀ ಮಂಜು ಕಂಡುಬರುವ ಸಾಧ್ಯತೆ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಮುಂದಿನ 2 ದಿನಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆ ಇದೆ. ಮುಂದಿನ 2 ದಿನ ಕರ್ನಾಟಕದ ಒಳನಾಡಿನ ಮೇಲೆ ಬೆಳಗಿನ ಜಾವದಲ್ಲಿ ಗಾಢವಾದ ಮಂಜು ಬೀಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನದ ಸಾಧ್ಯತೆ ಇದೆ.
ಅಕ್ಟೋಬರ್ 27ರಂದು ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಅಕ್ಟೋಬರ್ 28ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನದ ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಅಕ್ಟೋಬರ್ 29ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮಳೆ ಇರುವುದಿಲ್ಲ.
ಅಕ್ಟೋಬರ್ 30ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಅಕ್ಟೋಬರ್ 31ರಂದು ಕರಾವಳಿಯ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನದ ಬೆಳಗಾವಿ, ಧಾರವಾಡ, ಬೀದರ್, ಕಲಬುರ್ಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ.
ನವೆಂಬರ್ 1ರಂದು ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಮೇಲೆ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸುರಿದ ಮಳೆಯಿಂದಾಗಿ ಕರ್ನಾಟಕದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ.












Click it and Unblock the Notifications