ಖಾಸಗಿ ಅನುದಾನಿತ ಶಾಲೆಗಳಿಗೆ ಸಿಹಿಸುದ್ದಿ ನೀಡಿದ ಶಿಕ್ಷಣ ಇಲಾಖೆ
ಬೆಂಗಳೂರು, ಅಕ್ಟೋಬರ್ 06: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ. ಕಾವೇರಿ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಜಿಲ್ಲೆಯ ಯಾವುದೇ ಖಾಸಗಿ ಶಾಲೆ ನವೀಕರಿಸದ ಕಾರಣದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಲು ತೊಂದರೆ ಆದಲ್ಲಿ ಅಥವ ಶಾಲೆಗಳು ಅನಧಿಕೃತ ಎಂದು ಪರಿಗಣಿಸಲು ಕಾರಣರಾದಲ್ಲಿ ಜಿಲ್ಲಾ ಉಪ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸುತ್ತೋಲೆಯು ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ 2024-25ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಅವಕಾಶ ಕಲ್ಪಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ. ಹಲವಾರು ಸರ್ಕಾರಿ ಆದೇಶಗಳನ್ನು ಉಲ್ಲೇಖ ಮಾಡಲಾಗಿದೆ.

2024-25ನೇ ಸಾಲಿಗೆ ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ/ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗೆ ದಿನಾಂಕ 25-07-2024 ರಿಂದ 30-09-2024 ರವರೆಗೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯಂತೆ ಪರಿಶೀಲಿಸಲಾಗಿ, ನಿಗದಿಪಡಿಸಿದ ಕಾಲಾವಕಾಶದೊಳಗೆ ಇನ್ನೂ ಶೇ. 50ರಷ್ಟು ಖಾಸಗಿ ಶಾಲೆಗಳು ಮಾನ್ಯತೆ ನವೀಕರಣ ಪಡೆಯಲು ಅರ್ಜಿ ಸಲ್ಲಿಸದೇ ಇರುವುದು ಗಮನಿಸಲಾಗಿದೆ ಎಂದು ಹೇಳಿದೆ.
ಕಾಯ್ದೆ ಮತ್ತು ನಿಯಮಗಳನುಸಾರ ಶಾಲೆಗಳನ್ನು ಅಧಿಕೃತ ಎಂದು ಪರಿಗಣಿಸಲು ಶಾಲೆಗಳು ಆಯಾ ಅವಧಿಯಲ್ಲಿ ಮಾನ್ಯತೆಯನ್ನು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಮಾನ್ಯತೆ ನವೀಕರಿಸದಿದ್ದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು, ಆರ್‌ಟಿಇ ಶುಲ್ಕ ಮರುಪಾವತಿಗೆ ಪ್ರಸ್ತಾವನೆ ಪರಿಗಣಿಸಲು, ಅನುದಾನಿತ ಶಾಲಾ ಶಿಕ್ಷಕರ ವೇತನ ಪಾವತಿಗೆ ಅವಕಾಶವಿರುವುದಿಲ್ಲ.
ಆದ್ದರಿಂದ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರಿಗಳಾದ ಉಪನಿರ್ದೇಶಕರು (ಆಡಳಿತ) ಇವರು ವೈಯುಕ್ತಿಕ ಗಮನ ಹರಿಸಿ ತಮ್ಮ ವ್ಯಾಪ್ತಿಯಲ್ಲಿ ಈವರೆವಿಗೂ 2024-25ನೇ ಸಾಲಿಗೆ ಮಾನ್ಯತೆ ಪಡೆಯಲು ಅಗತ್ಯ ದಾಖಲೆ/ ಮಾಹಿತಿಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದಿರುವ ಶಾಲಾ ಆಡಳಿತ ಮಂಡಳಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿ ಅಗತ್ಯ ಕ್ರಮವಹಿಸಲು ತಿಳಿಸಿದೆ.
ಎಷ್ಟು ಬಾರಿ ಅರ್ಜಿ ಸಲ್ಲಿಸಬಹುದು?: ನಿಯಮಗಳಿಗೆ ತಿದ್ದುಪಡಿ ತಂದಿರುವ ಅಂಶಗಳಂತೆ ಅಗತ್ಯ ಮಾಹಿತಿ/ ದಾಖಲೆಗಳಿಂದ ಮಾನ್ಯತೆ ಅರ್ಜಿಯು ತಿರಸ್ಕೃತಗೊಂಡ ಶಾಲಾ ಆಡಳಿತ ಮಂಡಳಿಗಳಿಗೆ ಈಗಾಗಲೇ ಪಾವತಿಸಿದ ಶುಲ್ಕವನ್ನು ಬಳಸಿ ಇದೇ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆ ಗರಿಷ್ಟ 3 ಬಾರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವಂತೆ ಅರ್ಜಿ ತಿರಸ್ಕೃತಗೊಂಡಿರುವ ಶಾಲಾ ಆಡಳಿತ ಮಂಡಳಿಗಳು ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣವೇ ಮರು ಅರ್ಜಿ ಸಲ್ಲಿಸಲು ಕ್ರಮವಹಿಸುವುದು.
ಸಕ್ಷಮ ಪ್ರಾಧಿಕಾರಿಗಳು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸಿದ ಶಾಲೆಗಳಿಗೆ ಸುತ್ತೋಲೆಯಲ್ಲಿ ಸೂಚಿಸಿದಂತೆ ಮಾನ್ಯತೆ ನವೀಕರಣವನ್ನು ಮೊದಲ ಬಾರಿಗೆ 10 ವರ್ಷಗಳಿಗೆ ನೀಡಲು ಅಗತ್ಯ ಕ್ರಮವಹಿಸುವುದು 2024-25ನೇ ಸಾಲಿನಲ್ಲಿ ಪ್ರಥಮ ಮಾನ್ಯತೆ/ ಮಾನ್ಯತೆ ನವೀಕರಣವಾಗದಿರುವಂತಹ ಶಾಲಾ ಆಡಳಿತ ಮಂಡಳಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 05-10-2024 ರಿಂದ ದಿನಾಂಕ 04-11-2024ರವರೆಗೆ ಅಂತಿಮ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಈವರೆವಿಗೂ ಪ್ರಥಮ ಮಾನ್ಯತೆ/ ಮಾನ್ಯತೆ ನವೀಕರಣ ಪಡೆಯದಿರುವ ಶಾಲಾ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿ ಅವಕಾಶ ನೀಡಿದ್ದು, ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಮಾನ್ಯತೆ ಪಡೆಯಲು ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಕ್ರಮ ವಹಿಸುವುದು. ಸಲ್ಲಿಕೆಯಾದ ಅರ್ಜಿಗಳನ್ನು ವಿಳಂಬಕ್ಕೆ ಅವಕಾಶ ಇಲ್ಲದಂತೆ ಇತ್ಯರ್ಥಪಡಿಸಲು ಕ್ರಮವಹಿಸಲು ಸೂಚನೆ ನೀಡಲಾಗಿದೆ.
ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಮತ್ತು ಕಾಲಾವಧಿ ಮುಗಿದ ಕಾರಣ ನವೀಕರಿಸಿದ ಪರಿಷ್ಕೃತ ದಾಖಲೆಗಳನ್ನು ಆಡಳಿತ ಮಂಡಳಿಗಳು ಎಸ್‌ಎಟಿಎಸ್‌ನಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ನಂತರ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅದರಲ್ಲಿನ ಮಾಹಿತಿಗಳನ್ನು ಪರಿಶೀಲಿಸಿ ನವೀಕರಣಕ್ಕೆ ಪರಿಗಣಿಸಲಾಗುವುದು ಎಂದು ತಿಳಿಸಿದೆ.












Click it and Unblock the Notifications