ವಿಧಾನ ಪರಿಷತ್; ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಿ
ಬೆಂಗಳೂರು, ಅಕ್ಟೋಬರ್ 06; ವಿಧಾನ ಪರಿಷತ್ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಚುನಾವಣಾ ಆಯೋಗ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಿದೆ. ಅರ್ಜಿ ನಮೂನೆ 19ರಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಲು 6/11/2023 ಕೊನೆಯ ದಿನವಾಗಿದೆ.
ಚುನಾವಣಾ ಆಯೋಗ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಅರ್ಹತಾ ದಿನಾಂಕ 1/11/2023ಕ್ಕೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ಧಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿರುತ್ತದೆ.

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳು ಒಳಪಡುತ್ತವೆ. ಕ್ಷೇತ್ರದ ವ್ಯಾಪ್ತಿಗೊಳಪಡುವ ಮೈಸೂರು ವಿಭಾಗದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲಾಧಿಕಾರಿಗಳನ್ನು, ಆಯುಕ್ತರು, ಮೈಸೂರು ಮಹಾನಗರಪಾಲಿಕೆ ಮೈಸೂರು, ಮೈಸೂರು ವಿಭಾಗದ ಆಯಾ ಉಪ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಉಪವಿಭಾಗಾಧಿಕಾರಿಗಳು, ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ ಅನ್ನು ಸಹಾಯಕ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಚುನಾವಣಾ ಆಯೋಗದ ದಿನಾಂಕ 9/08/2023ರ ಪತ್ರದನ್ವಯ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧ ಪಡಿಸಲಾಗುತ್ತಿರುವುದರಿಂದ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ 30/12/2023ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.
ದಕ್ಷಿಣ ಶಿಕ್ಷಕರ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಮಾರ್ಗಸೂಚಿ
* ಭಾರತದ ಪ್ರಜೆಯಾಗಿರುವ ಮತ್ತು ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಮತ್ತು 1ನೇ ನವೆಂಬರ್ 2023ಕ್ಕೆ ಮೊದಲು ಆರು ವರ್ಷದ ಅವಧಿಯಲ್ಲಿ ಕನಿಷ್ಠ ಒಟ್ಟು ಮೂರು ವರ್ಷಗಳಷ್ಟು ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ.
* ಯಾವುದೇ ವ್ಯಕ್ತಿಯು ನಮೂನೆ-19 ರಲ್ಲಿ ಅರ್ಜಿಯನ್ನು ಸಲ್ಲಿಸಿ, ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೋಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಿ ಸಲ್ಲಿಸತಕ್ಕದ್ದು.
* ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿಯು ಭೋದನಾ ವೃತ್ತಿಯಲ್ಲಿ ನಿರತನಾಗಿರದಿದ್ದಲ್ಲಿ, ಪಮಾಣಪತ್ರವನ್ನು ಅಂತಹ ವ್ಯಕ್ತಿಯು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿರತಕ್ಕದ್ದು.
* ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲಾ ಅರ್ಜಿಗಳನ್ನು ಒಟ್ಟಾರೆಯಾಗಿ ಕಳುಹಿಸಬಹುದು. ಒಂದೇ ಕುಟುಂಬದ ಇತರ ಸದಸ್ಯರ ನಮೂನೆ-19ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ ಮೂಲ ಪಮಾಣ ಪತ್ರಗಳನ್ನು ಒದಗಿಸತಕ್ಕದ್ದು.
* ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ಅವನು ತಿಳಿದಿರುವ ಅಥವಾ ನಂಬುವಂತಹ ಅಥವಾ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1950 ರ 31ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುವುದು.
* ನಮೂನೆ-19ರಲ್ಲಿನ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿ/ ನಿಯೋಜಿತ ಅಧಿಕಾರಿಗಳವರ ಕಛೇರಿಯಿಂದ ಪಡೆಯಬಹುದು. ಕೈಬರಹದ, ಬೆರಳಚ್ಚು ಮಾಡಿದ ಅಥವಾ ಖಾಸಗಿಯಾಗಿ ಮುದ್ರಿಸಿದ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದು.
* ನಮೂನೆ -19 ರ ಅರ್ಜಿಗಳನ್ನು ಬಲ್ಕ್ ಆಗಿ (ಒಟ್ಟಿಗೆ) ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.












Click it and Unblock the Notifications