Karnataka Election: ನಾಮಪತ್ರ ಸಲ್ಲಿಕೆ ಗಡುವು ಮುಕ್ತಾಯ: ಏ.21ರಂದು ಪರಿಶೀಲನೆ; ವಾಪಸ್ ಪಡೆಯಲು ಕೊನೇ ದಿನ ಯಾವಾಗ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಾಮಪತ್ರ ಕೊಡಿಸಿದ್ದರೆ, ಟಿಕೆಟ್ ವಂಚಿತ ಹಲವು ಆಕಾಂಕ್ಷಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.
ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ಜೊತೆಗೆ ಚುನಾವಣಾ ಕಾವು ಏರುಗತಿಯಲ್ಲಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿವೆ. ಇಂದಿಗೆ (ಗುರುವಾರ, ಏಪ್ರಿಲ್ 20) ನಾಮಪತ್ರ ಸಲ್ಲಿಕೆಗೆ ನೀಡಿದ್ದ ಗಡುವು ಮುಕ್ತಾಯಗೊಂಡಿದೆ.

ಕರ್ನಾಟಕದ 22 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಗೆ ಏಪ್ರಿಲ್ 13ರಿಂದ ಏಪ್ರಿಲ್ 20ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ರಾಜ್ಯ ಚುನಾವಣಾ ಆಯೋಗ ಅವಕಾಶ ನೀಡಲಾಗಿತ್ತು. ಹೀಗಾಗಿ ಇಂದಿಗೆ ನಾಮಪತ್ರ ಸಲ್ಲಿಕೆ ಅಂತ್ಯವಾಗಿದ್ದು, ಶುಕ್ರವಾರ, ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ.
ಆಯಾ ವಿಧಾನಸಭಾ ಕ್ಷೇತ್ರಗಳ ಆಯಾ ತಾಲ್ಲೂಕು ಕಚೇರಿ ಅಥವಾ ತಹಶೀಲ್ದಾರರ ಕಚೇರಿಯಲ್ಲಿ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳನ್ನು ನಾಳೆ ಅಂದರೆ, ಶುಕ್ರವಾರ, ಏಪ್ರಿಲ್ 21ರಂದು ಪರಿಶೀಲನೆ ನಡೆಸಲಾಗುತ್ತದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ. ಅನಂತರ ಅಭ್ಯರ್ಥಿಗಳು ಚುನಾವಣಾ ಸಮಾವೇಶ, ಸಭೆ-ಸಮಾರಂಭ ನಡೆಸಲು, ಮನೆಮನೆ ಪ್ರಚಾರ ನಡೆಸಲು ಷರತ್ತುಬದ್ಧ ಅವಕಾಶವಿದೆ.
ಇನ್ನು ಮೇ 10ರಂದು ಕರ್ನಾಟಕದ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟವಾಗಲಿದೆ.

ನಾಮಪತ್ರ ಪರಿಶೀಲನೆ ನಂತರ ಕಣದಲ್ಲಿ ಉಳಿಯುವ ಎಲ್ಲ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಈಗಾಗಲೇ ಕೆಲವು ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಯಾರಿಗೆ ಅದೃಷ್ಟ, ಯಾರಿಗೆ ದುರಾದೃಷ್ಟ ಕಾದಿದೆ ಎಂಬುದನ್ನು ತಿಳಿಯಲು ಮೇ 13ರ ವರೆಗೆ ಕಾಯಲೇಬೇಕು.
2023ರ ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸ್ಪರ್ಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಕಣಕ್ಕಿಳಿದಿದ್ದಾರೆ.
ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಪರ ಸ್ಪರ್ಧೆಗೆ ಇಳಿದಿದ್ದರೆ, ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
| ಕ್ಷೇತ್ರ | ಅಭ್ಯರ್ಥಿ | ಪಕ್ಷ |
| ವರುಣಾ | ವಿ. ಸೋಮಣ್ಣ | ಬಿಜೆಪಿ |
| ಶಿಕಾರಿಪುರ | ಬಿ.ವೈ. ವಿಜಯೇಂದ್ರ | ಬಿಜೆಪಿ |
| ಕೊರಟಗೆರೆ | ಜಿ. ಪರಮೇಶ್ವರ್ | ಕಾಂಗ್ರೆಸ್ |
| ಅಥಣಿ | ಲಕ್ಷ್ಮಣ ಸವದಿ | ಕಾಂಗ್ರೆಸ್ |
| ಗೋಕಾಕ್ | ರಮೇಶ್ ಜಾರಕಿಹೊಳಿ | ಬಿಜೆಪಿ |
| ಭಾಲ್ಕಿ | ಈಶ್ವರ್ ಖಂಡ್ರೆ | ಕಾಂಗ್ರೆಸ್ |
| ಬಳ್ಳಾರಿ ಗ್ರಾಮೀಣ | ಬಿ. ಶ್ರೀರಾಮುಲು | ಬಿಜೆಪಿ |
| ದಾವಣಗೆರೆ ದಕ್ಷಿಣ | ಶಾಮನೂರು ಶಿವಶಂಕರಪ್ಪ | ಕಾಂಗ್ರೆಸ್ |
| ಚಿಕ್ಕಮಗಳೂರು | ಸಿ.ಟಿ. ರವಿ | ಬಿಜೆಪಿ |
| ಹಾಸನ | ಪ್ರೀತಂ ಗೌಡ | ಬಿಜೆಪಿ |
| ಬೆಳಗಾವಿ ಗ್ರಾಮೀಣ | ಲಕ್ಷ್ಮೀ ಹೆಬ್ಬಾಳ್ಕರ್ | ಕಾಂಗ್ರೆಸ್ |
| ವಿಜಯಪುರ (ನಗರ) | ಬಸನಗೌಡ ಪಾಟೀಲ್ ಯತ್ನಾಳ್ | ಬಿಜೆಪಿ |
| ಬೀಳಗಿ | ಮುರುಗೇಶ್ ನಿರಾಣಿ | ಬಿಜೆಪಿ |
| ಬಬಲೇಶ್ವರ | ಎಂ.ಬಿ. ಪಾಟೀಲ್ | ಕಾಂಗ್ರೆಸ್ |
| ರಾಮನಗರ | ನಿಖಿಲ್ ಕುಮಾರಸ್ವಾಮಿ | ಜೆಡಿಎಸ್ |
| ಹೊಳೇನರಸೀಪುರ | ಎಚ್.ಡಿ. ರೇವಣ್ಣ | ಜೆಡಿಎಸ್ |
| ರಾಜರಾಜೇಶ್ವರಿ ನಗರ | ಮುನಿರತ್ನ | ಬಿಜೆಪಿ |
| ಕೋಲಾರ | ವರ್ತೂರು ಪ್ರಕಾಶ್ | ಬಿಜೆಪಿ |
| ಚಿಕ್ಕಬಳ್ಳಾಪುರ | ಕೆ. ಸುಧಾಕರ್ | ಬಿಜೆಪಿ |
| ನಂಜನಗೂಡು | ದರ್ಶನ್ ಧ್ರುವನಾರಾಯಣ | ಕಾಂಗ್ರೆಸ್ |
| ಶ್ರೀನಿವಾಸಪುರ | ಕೆ.ಆರ್. ರಮೇಶ್ ಕುಮಾರ್ | ಕಾಂಗ್ರೆಸ್ |
| ಯಮಕನಮರಡಿ | ಸತೀಶ್ ಜಾರಕಿಹೊಳಿ | ಕಾಂಗ್ರೆಸ್ |
| ಮಲ್ಲೇಶ್ವರಂ | ಅಶ್ವಥ್ ನಾರಾಯಣ | ಬಿಜೆಪಿ |












Click it and Unblock the Notifications