Lakshmi Hebbalkar: ಸಿ.ಟಿ.ರವಿ ವಿಡಿಯೋ ರಿಲೀಸ್ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ನಿಜಕ್ಕೂ ಅದರಲ್ಲೇನಿದೆ?
ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸದನದಲ್ಲಿ ಅಶ್ಲೀಲ ಪದ ಬಳಸಿದ್ದ ಆರೋಪದ ಮೇರೆಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಬಂಧಿಸಲಾಗಿತ್ತು. ಆದರೆ, ಸಿಟಿ ರವಿ ಅವರು ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ಅವರ ಹೇಳಿಕೆ ದಾಖಲಾಗಿದೆ ಎನ್ನಲಾದ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕಲಾಪದ ವೇಳೆ ಸಿ.ಟಿ.ರವಿ ಅವರು ಮಾತನಾಡಿದ್ದರು ಎನ್ನಲಾದ ವಿಡಿಯೋ ಅನ್ನು ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಸಿಟಿ ರವಿ ಆಡಿದ ಮಾತನ್ನು ಈ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಂದಿಗೂ ಕ್ಷಮಿಸುವುದಿಲ್ಲ. ಯಾವ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ, ಸಿ.ಟಿ.ರವಿ ಅವರಿಗೆ ಶಿಕ್ಷೆ ಆಗುವವರೆಗೆ ಬಿಡುವ ಮಾತಿಲ್ಲ ಎಂದು ಸವಾಲ್ ಹಾಕಿದ್ದಾರೆ.

ಇಂತಾ ನೂರು ಸಿಟಿ.ರವಿ ಬಂದ್ರೂ ನಾನು ಹೆದರಲ್ಲ, ನನಗೆ ಅಂತಾ ಪದವನ್ನ ಬಳಸಿದ್ದೀರಿ. ನನ್ನ ಬಳಿ ನೀವು ಆಡಿರುವ ಮಾತುಗಳಿಗೆ ಸಾಕ್ಷಿ ಇದೆ, ಅದನ್ನು ಇಂದೇ ರಿಲೀಸ್ ಮಾಡ್ತೀನಿ. ನಿಮ್ಮ ಚಿಕ್ಕಮಗಳೂರಿಗೆ ಬಂದು ನಿಮ್ಮನೆ ಹೆಣ್ಣುಮಕ್ಕಳನ್ನ ಆ ಪದ ಬಳಸಿದರೆ ನೀವು ಸುಮ್ಮನೆ ಇರ್ತೀರಾ? ಎನ್‌ಕೌಂಟರ್ ಎನ್ನುತ್ತೀರಲ್ಲ, ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ.ರವಿ ಅವರೇ ನಿಮ್ಮ ಮನೇಲಿ ಯಾರೂ ಹೆಣ್ಣುಮಕ್ಕಳು ಇಲ್ಲವಾ? ದೇವರ ಮುಂದೆ ಹೋಗಿ ಕೈಮುಗಿಯುತ್ತೀರಿ. ಇಂತಹ ಪದ ಬಳಕೆ ಮಾಡಿ ರಾಜಾರೋಷವಾಗಿ ಎಲ್ಲ ಕಡೆ ಓಡಾಡುತ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು, ನಿಮ್ಮ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ, ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸಿ.ಟಿ.ರವಿ ಆ ಪದ ಬಳಕೆ ಮಾಡಿರುವುದಕ್ಕೆ ಸಾಕ್ಷಿ ಇದೆ. ಆದರೂ ಬಿಜೆಪಿ ನಾಯಕರು ಯಾರಾದರೂ ಒಬ್ಬರು ಕ್ಷಮೆ ಕೇಳಿದ್ದಾರಾ? ನೋಡಿದ್ರೆ ಸಿಟಿ ರವಿ ಅವರನ್ನು ಮೆರವಣಿಗೆ ಮಾಡಿ ಮೆರೆಸುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? ಎಂದು ಗುಡುಗಿದ್ದಾರೆ.
ನನಗೆ ಆಗಿರುವ ಅವಮಾನದ ಬಗ್ಗೆ ರಾಷ್ಟ್ರಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯುತ್ತೇನೆ. ನನಗೆ ಅವಕಾಶ ಸಿಕ್ಕಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ವಿಚಾರ ಪ್ರಸ್ತಾಪಿಸುತ್ತೇನೆ. ನಮ್ಮನ್ನು ರಾಜಕೀಯವಾಗಿ ಮಣಿಸಲು ಈ ಹುನ್ನಾರ ನಡೆಯುತ್ತಿದೆ. ಈ ರೀತಿ ಮಾಡಿದರೆ ನಾವು ನೋವಿನಿಂದ ಮನೆಯಲ್ಲೇ ಇರುತ್ತೇವೆ ಎಂದು ಭಾವಿಸಿದ್ದೀರಿ ಅನಿಸುತ್ತೆ, ಹಾಗೇನಾದ್ರೂ ನಿಮ್ಮ ಮನಸಲ್ಲಿ ಇದ್ರೆ ಈಗಲೇ ಬಿಟ್ಟುಬಿಡಿ ಎಂದು ಕೌಂಟರ್ ನೀಡಿದ್ದಾರೆ.

ನಾನು ಒಂಟಿಯಲ್ಲ, ನನ್ನೊಂದಿಗೆ ಇಡೀ ಕಾಂಗ್ರೆಸ್ ಪಕ್ಷ ಇದೆ. ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಇದ್ದಾರೆ. ಪ್ರಿಯಾಂಕಾ ಅವರು ಫೋನ್ ಮಾಡಿ ಈ ವಿಚಾರದ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ರಾಜ್ಯದ ಮಹಿಳೆಯರು ಕೂಡ ನನ್ನ ಜೊತೆ ಇದ್ದಾರೆ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.












Click it and Unblock the Notifications