ರೈತರಿಗೆ ಗುಡ್ ನ್ಯೂಸ್; ಕುಸುಮ್ ಸಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಂಪೂರ್ಣ ವಿವರ ತಿಳಿಯಿರಿ
ಗೌರಿಬಿದನೂರು, ಜೂನ್12: ಮುಂಗಾರು ಆರಂಭದ ಜೊತೆಗೆ ರಾಜ್ಯ ಸರ್ಕಾರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕುಸುಮ್- ಸಿ ಯೋಜನೆಯಿಂದಾಗಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇನ್ನು ಮುಂದೆ ಹಗಲಿನ ವೇಳೆಯೇ 7 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲಾಗುವುದು. ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವುದೇ ಕುಸುಮ್- ಸಿ ಯೋಜನೆಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕುಸುಮ್- ಸಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2021ರಲ್ಲಿ ರಾಜ್ಯದಲ್ಲೂ ಇದನ್ನು ಜಾರಿಗೊಳಿಸುವ ಸಂಬಂಧ ಆಗಿನ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿತ್ತು. ಆದರೆ, ನಂತರ 2 ವರ್ಷ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಗೊಳಿಸುವ ಪ್ರಯತ್ನ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೆ.ಜೆ.ಜಾರ್ಜ್ ಅವರು ಸಚಿವರಾದ ಮೇಲೆ ರಾಜ್ಯದಲ್ಲಿ ಕುಸುಮ್- ಸಿ ಯೋಜನೆ ಅನುಷ್ಠಾನ ಆರಂಭಿಸಲಾಯಿತು ಎಂದರು.

ಕುಸುಮ್-ಸಿ ಯೋಜನೆಯಡಿ ನಮ್ಮ ರಾಜ್ಯದಲ್ಲಿ 389 ವಿದ್ಯುತ್ ಸರಬರಾಜು ಉಪ ಕೇಂದ್ರಗಳನ್ನು ಸೌರೀಕರಣಗೊಳಿಸಲಾಗುತ್ತಿದೆ. 2396 ಮೆಗಾವ್ಯಾಟ್ ಸಾಮರ್ಥ್ಯದ ಸೌರಘಟಕಗಳು 1,555 ಕೃಷಿ ಫೀಡರ್‌ಗಳಿಗೆ ಸೌರವಿದ್ಯುತ್ ಬಲ ನೀಡಲಿದೆ. ಇದರಿಂದ 6,32,794 ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಸಿಗಲಿದೆ. ಇದರಿಂದ ರೈತರಿಗೆ ಹಗಲು ವೇಳೆಯೇ ಗುಣಮಟ್ಟದ ವಿದ್ಯುತ್ ಲಭ್ಯವಾಗುವುದರ ಜತೆಗೆ ವಿದ್ಯುತ್ ಅಪವ್ಯಯವೂ ನಿಲ್ಲುತ್ತದೆ. ಹೀಗಾಗಿ ಕುಸುಮ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದ ಇಂಧನ ಸಚಿವ ಕೆ.ಜೆ.ಜಾರ್ಜ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರೈತರಿಗೆ ಸೋಲಾರ್ ಪಂಪ್ ಸೆಟ್ ನೀಡುವ ಕುಸುಮ್- ಬಿ ಯೋಜನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾದರೂ ಅವರು ನೀಡುವ ಸಹಾಯಧನ ಶೇ. 30ರಷ್ಟು ಮಾತ್ರ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರದ ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಿಸಲಾಗಿದೆ. ಶೇ. 20ರಷ್ಟನ್ನು ಮಾತ್ರ ಫಲಾನುಭವಿ ಭರಿಸಿದರೆ ಸಾಕು. ಕೇಂದ್ರ ಸರ್ಕಾರದ ಯೋಜನೆಗಳಿಗೂ ನಮ್ಮ ಸರ್ಕಾರ ಅವರಿಗಿಂತ ಹೆಚ್ಚು ಸಹಾಯಧನ ನೀಡುತ್ತಿರವುದೇ ರೈತರ ಬಗ್ಗೆ ನಮಗಿರುವ ಕಾಳಜಿಗೆ ಸಾಕ್ಷಿ ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೇ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿರಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ 4,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ಪ್ರಸ್ತುತ 35 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, 2030ರ ವೇಳೆಗೆ ಇದನ್ನು 60 ಸಾವಿರ ಮೆಗಾವ್ಯಾಟ್ ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸರ್ಕಾರ ವಾರ್ಷಿಕ 19,000 ಕೋಟಿ ರೂ. ಸಹಾಯಧನ ನೀಡುತ್ತಿದೆ. ಆದರೂ ನಮ್ಮ ಸರ್ಕಾರದ ಬಗ್ಗೆ ಪ್ರತಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಯಾವುದೇ ಕಾರಣಕ್ಕೂ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ಯೋಜನೆಯಡಿ ಇಂಧನ ಮೂಲ ಸೌಕರ್ಯಕ್ಕೆ ಕೇಂದ್ರ ಸರ್ಕಾರದಿಂದ ಶೇ. 60 ಸಹಾಯಧನ ಸಿಗುವುದರ ಜತೆಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಪ್ರತಿ ಮೀಟರ್ ಗೆ 900 ರೂ. ಸಬ್ಸಿಡಿ ಸಿಗುತ್ತದೆ. ಆದರೆ, ಕೆಲವೊಂದು ಷರತ್ತುಗಳ ಕಾರಣಕ್ಕೆ ಹಿಂದಿನ ರಾಜ್ಯ ಸರ್ಕಾರ ಅದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಆರ್ ಡಿಎಸ್ ಯೋಜನೆ ಅಳವಡಿಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಇಂಧನ ಸಚಿವರನ್ನು ಕೋರಲಾಗಿದ್ದು, ಷರತ್ತುಗಳಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಒಪ್ಪಿರುವ ಸಚಿವರು, ಇತರೆ ಇಲಾಖೆಗಳಿಂದ ಬರಬೇಕಾದಬಾಕಿ ವಸೂಲಿಗೆ ಶೇ. 2ರಷ್ಟು ಸೆಸ್ ವಿಧಿಸಬೇಕು ಮತ್ತು ಸರ್ಕಾರಿ ಕಚೇರಿಗಳಿಗೆ ಪ್ರಿ ಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಹೇಳಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ಸಚಿವ ಸಂಪುಟದ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.












Click it and Unblock the Notifications