KSRTC ಸರ್ವರ್ ಸಮಸ್ಯೆ: ಟಿಕೆಟ್ ಬುಕ್ ಆಗದೇ, ಹಣ ಹಿಂತಿರುಗದೇ ಜನರ ಪರದಾಟ
ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 'ಶಕ್ತಿ' ಯೋಜನೆ ಜಾರಿ ಬಳಿಕ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ. ಒಂದೆಡೆ ಯೋಜನೆಗೆ ಭರಪೂರ ಸ್ಪಂದನೆ ಸಿಕ್ಕಿದೆ. ಇನ್ನೊಂದೆಡೆ ಸೀಟು ಕಾಯ್ದಿರಿಸಲು ಆಗದೇ ಇತ್ತ ಹಣ ಸಹ ಮರಳದೇ ಜನರು ಪರದಾಡುತ್ತಿದ್ದಾರೆ.
ಶಕ್ತಿ ಯೋಜನೆ ಅನುಷ್ಠಾನ ಬಳಿಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಓಡಾಡಬಹುದಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳು ಕಳೆದ ಆರು ದಿನಗಳಿಂದ ರಷ್ ಆಗಿವೆ.

ಇತ್ತ ಆನ್‌ಲೈನ್ ಮೂಲಕ ಸೀಟು ಬುಕ್ ಮಾಡಲು ಹೊರಟರೆ ಸರ್ವರ್ ಡೌನ್ ಆಗಿ ಸೀಟುಗಳೇ ಬುಕ್ ಆಗುತ್ತಿಲ್ಲ. ಹಣ ಮಾತ್ರ ಬ್ಯಾಂಕ್ ಖಾತೆ/ಪೇಟಿಎಂ ಇನ್ನಿತರ ವಾಲೆಟ್‌ಗಳಿಂದ ಕಡಿತವಾಗುತ್ತಿದೆ. ಇತ್ತ ಹಣವು ಇಲ್ಲದೇ, ಸೀಟುಗಳು ಬುಕ್ ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಹಿಳೆಯರಿಂದ ಬುಕ್ಕಿಂಗ್ ಅಧಿಕ: ಸಮಸ್ಯೆ ಸೃಷ್ಟಿ
ಮಹಿಳೆಯರು ಬಸ್‌ನಲ್ಲಿ ಆಸನ ಕಾಯ್ದಿರಿಸಿದರೆ ಅವರಿಗೆ 20 ರೂಪಾಯಿ ಮಾತ್ರವೇ ಚಾರ್ಜ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾ ಮುಂದು ತಾ ಮುಂದು ಎಂದು ಬಸ್ ಏರುತ್ತಿರುವ ಮಹಿಳೆಯರು ಹೆಚ್ಚೆಚ್ಚು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಇತ್ತ ಸಾಮಾನ್ಯವಾಗಿ ಸಾರ್ವಜನಿಕರು ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಆದರೆ ಸರ್ವರ್ ಡೌನ್ ಆದ ಕಾರಣ ಸಮಸ್ಯೆ ಉಂಟಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಈ ಸಂಬಂಧ ಟ್ವಿಟ್ಟರ್‌ಗಳಲ್ಲಿ ಸಾರಿಗೆ ನಿಮಗದ @ksrtc_journery ಖಾತೆಗೆ ಟ್ಯಾಗ್ ಮಾಡಿ ಸಣ್ಣ ಅಭಿಯಾನವೇ ಆರಂಭವಾಗಿದೆ. ಟಿಕೆಟ್ ಬುಕ್ ಮಾಡಿದರೆ ಬುಕ್ ಆಗುತ್ತಿಲ್ಲ. ಹಣವು ಮರಳಿ ಬರುತ್ತಿಲ್ಲ. ಈ ಸಮಸ್ಯೆಗೆ ಮುಕ್ತಿ ಯಾವಾಗ. ಬೇರೆ ವ್ಯವಸ್ಥೆ ಇಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನಮ್ಮ ಹಣ ಯಾವಾಗ ವಾಪಾಸ್ ಮಾಡುತ್ತೀರಾ ಎಂದು ಗೋಗರೆಯುತ್ತಿದ್ದಾರೆ.

ಈ ಸಮಸ್ಯೆಗಳಿಗೆ ಉತ್ತರಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಧಿಕಾರಿಗಳು ಕೆಲವು ತಾಂತ್ರಿಕ ಕಾರಣಗಳಿಂದ ಈ ಸಮಸ್ಯೆ ಉಂಟಾಗಿದೆ. ಸೌರ್ವರ್ ಟೌನ್ ಆದ ಕಾರಣ ಟಿಕೆಟ್ ಬುಕ್ ಆಗುತ್ತಿಲ್ಲ. ಕಡಿತಗೊಂಡ ನಿಮ್ಮ ಟಿಕೆಟ್ ಹಣವು ವರ್ಕಿಂಗ್ 6-7 ದಿನದ ಒಳಗೆ ಮರುಪಾವತಿಯಾಗುತ್ತದೆ ಎಂದು ಸಬೂಬು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಈವರೆಗಿನ ಉಚಿತ ಮಹಿಳಾ ಪ್ರಯಾಣಿಕರ ಮಾಹಿತಿ
ಶಕ್ತಿ ಯೋಜನೆ ಜಾರಿ ಬಳಿಕ ಕರ್ನಾಟಕದ ನಾಲ್ಕು ನಿಗಮದ ನಿಗದಿತ ಬಸ್‌ಗಳಲ್ಲಿ ಮಹಿಳೆಯರು ಓಟಾಟ ಹೆಚ್ಚಾಗುತ್ತಿದೆ. ಯೋಜನೆ ಜಾರಿದ ಜೂನ್ 11ರಂದು 5.71 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸಿದ್ದಾರೆ. ಅದೇ ರೀತಿ ಜೂನ್ 12 ರಂದು 41.34 ಲಕ್ಷ ಮಂದಿ, ಜೂನ್ 13ರಂದು 51.52 ಲಕ್ಷ ಮಂದಿ, ಜೂನ್ 14ರಂದು 50.17 ಲಕ್ಷ ಮಂದಿ ಓಡಾಟ ನಡೆಸಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಭೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಸೇರ್ಪಡೆಯಾಗಿದೆ.












Click it and Unblock the Notifications