ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಕೆಎಸ್ಆರ್ ಟಿಸಿ
ಬೆಂಗಳೂರು, ಮೇ 4 : ಕಳೆದ ವಾರ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದ ಸಾರಿಗೆ ಇಲಾಖೆ, ಈ ವಾರಂತ್ಯದಲ್ಲಿ ಕೆಎಸ್ಆರ್ ಟಿಸಿ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ. ನಷ್ಟದ ಕಾರಣ ಮುಂದಿಟ್ಟುಕೊಂಡು ಪ್ರಯಾಣದರವನ್ನು ಶೇ 7.96ರಷ್ಟು ಹೆಚ್ಚಳ ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚಿಸಿರುವ ಪ್ರಯಾಣ ದರ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಸಾಮಾನ್ಯ ಬಸ್ಸುಗಳ ಪ್ರಯಾಣ ದರವನ್ನು ಮಾತ್ರ ಏರಿಕೆ ಮಾಡಿದ್ದು, ರಾಜಹಂಸ, ವೋಲ್ವೋ, ಸ್ಲೀಪರ್ ಬಸ್ಸುಗಳಿಗೆ ಈ ದರ ಏರಿಕೆ ಅನ್ವಯವಾಗುತ್ತಿಲ್ಲ. [ಬಿಎಂಟಿಸಿ ದರ ಏರಿಕೆ]

ಹೆಚ್ಚಳವಾದವು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಸುಗಳ ಪ್ರಯಾಣ ದರವನ್ನು ಶೇ. 7.96ರಷ್ಟು ಏರಿಕೆ ಮಾಡಲಾಗಿದೆ. 2013ರ ಜೂನ್‌ನಲ್ಲಿ ಪ್ರಯಾಣ ದರವನ್ನು ಕೆಎಸ್‌ಆರ್ ಟಿಸಿ ಶೇ. 10.50ರಷ್ಟು ಹೆಚ್ಚಳ ಮಾಡಿತ್ತು. ಸದ್ಯ ಶೇ . 7.96ರಷ್ಟು ದರ ಹೆಚ್ಚಳ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.
ದರ ಏರಿಕೆ ಏಕೆ? : ಡೀಸೆಲ್ ದರ ಹೆಚ್ಚಳದಿಂದ ಸಂಸ್ಥೆಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ಕೆಎಸ್ಆರ್ ಟಿಸಿ ಸ್ಪಷ್ಟನೆ ನೀಡಿದೆ. ಇಂಧನ ದರ ಪರಿಷ್ಕರಣೆಯಿಂದ ಪ್ರತಿ ವರ್ಷ ನಿಗಮಕ್ಕೆ 105.05 ಕೋಟಿ ರೂ. ಹೊರೆಬೀಳುತ್ತಿದೆ. ಇತರ ಖರ್ಚುಗಳು ಸೇರಿದಂತೆ ಸಂಸ್ಥೆಗೆ ವಾರ್ಷಿಕವಾಗಿ ಒಟ್ಟಾರೆ 207.82 ಕೋಟಿ ರೂ. ಹೊರೆಯಾಗಿದೆ ಎಂದು ಸಮರ್ಥನೆ ನೀಡಲಾಗಿದೆ.
ಕೆಎಸ್ಆರ್ ಟಿಸಿ ಪ್ರಯಾಣ ದರ ಏರಿಕೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರ ಮೇಲಿನ ಹೊರೆ ಕಡಿಮೆ ಬೀಳಲಿದೆ. ಗ್ರಾಮೀಣ ಪ್ರದೇಶಗಳ ಬಸ್ಸುಗಳ ದರವನ್ನು ಶೇ.7.66ಕ್ಕೆ ಏರಿಸಲಾಗಿದ್ದರೆ, ನಗರ ಪ್ರದೇಶಗಳಲ್ಲಿ ಶೇ. 7.96ರಷ್ಟು ಹೆಚ್ಚಳವಾಗಿದೆ.
ಪ್ರಮುಖ ನಗರಗಳಿಗೆ ಕೆಎಸ್ಆರ್ ಟಿಸಿ ಪ್ರಯಾಣ ದರ
ಮೈಸೂರು - 132
ಮಂಗಳೂರು - 332
ಹುಬ್ಬಳ್ಳಿ - 385
ಮಂಡ್ಯ - 90
ಧಾರವಾಡ - 403
ಗುಲ್ಬರ್ಗ - 592
ಬಳ್ಳಾರಿ - 296
ದಾವಣಗೆರೆ - 249
ಶಿವಮೊಗ್ಗ - 267
ಬೆಳಗಾವಿ - 474












Click it and Unblock the Notifications