KSRTC: ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆ, ಯಾವ ನೌಕರ, ಸಿಬ್ಬಂದಿಗೆ ಅನ್ವಯ

ಬೆಂಗಳೂರು, ಜನವರಿ 04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) 'ಕೆ.ಎಸ್.ಆರ್‌.ಟಿ.ಸಿ ಆರೋಗ್ಯ ಯೋಜನೆ' ಜಾರಿಗೆ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಕಾರ್ಮಿಕ ಮತ್ತು ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಸುತ್ತೋಲೆಯ ಅನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು 'ಕೆ.ಎಸ್.ಆರ್.ಟಿ.ಸಿ ಆರೋಗ್ಯ' ಯೋಜನೆಯನ್ನು ಜಾರಿಗೊಳಿಸುವ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ. ಈ ಯೋಜನೆ ಯಾವ-ಯಾವ ನೌಕರ/ ಸಿಬ್ಬಂದಿಗೆ ಅನ್ವಯ ಎಂದು ಸಹ ವಿವರಣೆ ನೀಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಬಂಧನೆಗಳು-1970ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

KSRTC Arogya Scheme Applicability For Officials And Employees

ನಿಗಮದ ಅಧಿಕಾರಿಗಳು/ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರದ ಮಾನ್ಯತೆ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ/ ಹೊರ ರೋಗಿಯಾಗಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು CGHS 2014ರ ದರಪಟ್ಟಿಯನ್ವಯ ಮರುಪಾವತಿ ಮಾಡಲಾಗುತ್ತಿದೆ. ಅಲ್ಲದೇ, ಅಧಿಕಾರಿಗಳು/ ನೌಕರರು ಹಾಗೂ ಅವರ ಅವಲಂಬಿತ ಸದಸ್ಯರ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಆಸ್ಪತ್ರೆಗಳಿಂದ ನೀಡುವ ಅಂದಾಜು ಪಟ್ಟಿಯನ್ವಯ ವೈದ್ಯಕೀಯ ಮುಂಗಡವನ್ನು ಮಂಜೂರು ಮಾಡುವ ಕ್ರಮ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.

ಈಗಿರುವ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು CGHS ದರಗಳಿಗಿಂತ ಹೆಚ್ಚಿನ ದರಗಳನ್ನು ಅಂದರೆ, ಆಸ್ಪತ್ರೆಯ ದರಗಳನ್ನು ವಿಧಿಸುತ್ತಿರುತ್ತವೆ. ತತ್ಸಂಬಂಧ ನೌಕರರು ವೈದ್ಯಕೀಯ ಚಿಕಿತ್ಸೆಗಾಗಿ ಭರಿಸಿದ ಮೊತ್ತವು ಪೂರ್ಣ ಪ್ರಮಾಣದಲ್ಲಿ ಮರುಪಾವತಿಯಾಗುವುದಿಲ್ಲ. ಇದರಿಂದಾಗಿ ನೌಕರರು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶವನ್ನು ಹೊಂದಿರುತ್ತದೆ.

ಅಲ್ಲದೇ, ನಗದು ರಹಿತ ವೈದ್ಯಕೀಯ ವ್ಯವಸ್ಥೆಯನ್ನು ಜಾರಿಗೆ ತರುವುದು ನೌಕರರ ಬಹುದಿನಗಳ ಬೇಡಿಕೆ ಆಗಿರುತ್ತದೆ. ತತ್ಸಂಬಂಧ ಎಲ್ಲಾ ನೋಂದಾಯಿತ ಕಾರ್ಮಿಕ ಸಂಘಟನೆಗಳು ನೌಕರರ ವಂತಿಕೆಯೊಂದಿಗೆ (Contributory Scheme) ಉತ್ತಮ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಜಾರಿಗೆ ತರುವಂತೆ ನಿರಂತರವಾಗಿ ಒತ್ತಾಯಿಸುತ್ತಿರುತ್ತವೆ ಎಂದು ಸುತ್ತೋಲೆ ತಿಳಿಸಿದೆ.

ಸುತ್ತೋಲೆಯ ವಿವರಗಳು: ದಿನಾಂಕ 13.11.2024ರಂದು ನಡೆದ ಕರಾರಸಾ ನಿಗಮದ ನಿರ್ದೇಶಕ ಮಂಡಳಿಯ 456ನೇ ಸಭೆಯಲ್ಲಿ ವಿಷಯವನ್ನು ಮಂಡಿಸಿದ್ದು, ನಿಗಮದ ಎಲ್ಲಾ ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರಿಗೆ ನೌಕರರ ಮಾಸಿಕ ವಂತಿಕೆಯೊಂದಿಗೆ (Contributory Scheme) ನಗದು ರಹಿತ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ರೂಪಿಸಲು ಮಂಡಳಿ ಠರಾವುರಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನೂತನ 'ಕೆ.ಎಸ್.ಆರ್.ಟಿ.ಸಿ ಆರೋಗ್ಯ' ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ನಿರ್ದೇಶನಗಳನ್ನು ನೀಡಲಾಗಿದೆ.

* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಯಮಗಳು-1970ಗೆ ಸೇರ್ಪಡೆ/ ತಿದ್ದುಪಡಿ ಕೈಗೊಳ್ಳುವುದನ್ನು ಬಾಕಿ ಇಟ್ಟು, ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆಯನ್ನು ರೂಪಿಸಲಾಗುತ್ತಿದೆ.

* ನಿಗಮದ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಪಡೆಯುವ ವೈದ್ಯಕೀಯ ಚಿಕಿತ್ಸೆ ಮತ್ತು ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ ಸಂದರ್ಭಾನುಸಾರ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಬಂಧನೆಗಳು -1970 (ಪ್ರಸ್ತುತ ಜಾರಿಯಲ್ಲಿರುವ ಸರ್ಕಾರದ ಮಾರ್ಗಸೂಚಿಗಳನ್ನೊಳಗೊಂಡಂತೆ) ಹಾಗೂ ನೂತನ 'ಕೆ.ಎಸ್.ಆರ್.ಟಿ.ಸಿ ಆರೋಗ್ಯ' ಯೋಜನೆ ಎರಡೂ ಜಾರಿಯಲ್ಲಿರುತ್ತವೆ. ಅಂದರೆ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆಯಡಿ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯೂ ನಗದು ರಹಿತಾ ಚಿಕಿತ್ಸಾ ವ್ಯಾಪ್ತಿಗೆ ಹಾಗೂ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ವಯ ಮರುಪಾವತಿ ಮಾಡಲಾಗುವುದು.

* ನೂತನ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆಯ ಅನುಷ್ಠಾನ ಹಾಗೂ ನಿರ್ವಹಣೆಗಾಗಿ ಪ್ರತ್ಯೇಕ ನ್ಯಾಸ ಮಂಡಳಿಯನ್ನು (ಟ್ರಸ್ಟ್) ರಚಿಸಲಾಗಿದ್ದು, ಈ ಟ್ರಸ್ಟ್ ನಲ್ಲಿ ಚಾಲಕ, ಚಾಲಕ- ಕಂ-ನಿರ್ವಾಹಕ/ ನಿರ್ವಾಹಕ, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳ ಪರವಾಗಿ ತಲಾ ಒಬ್ಬರಂತೆ ಟ್ರಸ್ಟ್‌ನ ಸದಸ್ಯರನ್ನಾಗಿ ಪ್ರತಿವರ್ಷ (On Rotation basis) ಒಂದು ವರ್ಷದ ಅವಧಿಗೆ ನಿಯೋಜಿಸಲಾಗುತ್ತದೆ.

* ಪ್ರಾರಂಭದಲ್ಲಿ ನಿಗಮವು ರೂ. 20 ಕೋಟಿಗಳನ್ನು ಟ್ರಸ್ಟ್‌ಗೆ ಪಾವತಿಸುತ್ತದೆ. ಅಲ್ಲದೇ, ಈ ಮೊತ್ತದೊಂದಿಗೆ ಪ್ರತಿ ವರ್ಷ ಶೇಕಡ 5ರ ದರದಲ್ಲಿ ಹೆಚ್ಚಿಸಿ ಟ್ರಸ್ಟ್‌ಗೆ ಪಾವತಿಸಲಾಗುತ್ತದೆ. ಒಂದು ವೇಳೆ ನಿಗಮದ ವಂತಿಕೆ ಮತ್ತು ನೌಕರರ ವಂತಿಕೆ ಮೊತ್ತ ಸೇರಿದಂತೆ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ ವೈದ್ಯಕೀಯ ವೆಚ್ಚ ಪಾವತಿಸಲು ಕೊರತೆ ಆದಲ್ಲಿ ವ್ಯತ್ಯಾಸದ ಮೊತ್ತವನ್ನೂ ಸಹ ನಿಗಮವೇ ಟ್ರಸ್ಟ್‌ಗೆ ಪಾವತಿಸುತ್ತದೆ.

* ಈ ಯೋಜನೆಯ ವಾಸ್ತವ ಕಾರ್ಯಾಚರಣೆಯು ದಿನಾಂಕ 06.01.2025ರಿಂದ ಜಾರಿಗೆ
ಬರುತ್ತದೆ.

ಈ ಯೋಜನೆ ಯಾರಿಗೆ ಅನ್ವಯ?

* ನಿಗಮದ ಸೇವೆಯಲ್ಲಿರುವ ಅಧಿಕಾರಿಗಳು, ತರಬೇತಿ, ಪರಿಕ್ಷಾರ್ಥಿ ಹಾಗೂ ಖಾಯಂ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು. (ಪತಿ/ ಪತ್ನಿ, ತಂದೆ, ತಾಯಿ ಹಾಗೂ ಮಕ್ಕಳು) ರಾಜ್ಯ ಸರ್ಕಾರದಿಂದ ನಿಗಮದ ಸೇವೆಗೆ ನಿಯೋಜನೆ ಮೇರೆಗೆ (ಹೆಚ್ಚುವರಿ/ ಪಭಾರ ಸೇವೆಯೂ ಸೇರಿದಂತೆ) ಬರುವ ಅಖಿಲ ಭಾರತ ಸೇವೆಗಳು (IAS, IPS, IFS), ಹಾಗೂ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು (KAS) ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು.

* ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ 1970ರ ನಿಬಂಧನೆಗಳ ನಿಯಮ 3 (ಡಿ) ರಲ್ಲಿನ ಕುಟುಂಬ (Family) ಪದವನ್ನು ಅದೇ ವ್ಯಾಖ್ಯಾನದೊಂದಿಗೆ ಈ ಕೆಳಗಿನ ಅಂಶಗಳನ್ನು ಸಹ ಒಳಗೊಂಡಂತೆ ಮುಂದುವರೆಸುವುದು. ನಿಗಮದ ನೌಕರನ/ ಳ ಪತಿ ಅಥವಾ ಪತ್ನಿ (ಅವಳು ಅಥವಾ ಅವನು ಈ ಸಂಸ್ಥೆಯ ನೌಕರ: ನೌಕರಳು ಆಗಿರದಿದ್ದರೆ)

* ತಂದೆ ಮತ್ತು ತಾಯಿ (ಮಲ ತಾಯಿಯನ್ನೊಳಗೊಂಡಂತೆ ಅವರು ನಿಗಮದ ನೌಕರರ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದು ಮತ್ತು ಅವರ ಒಟ್ಟು ಮಾಸಿಕ ಆದಾಯ ಚಾಲ್ತಿಯಲ್ಲಿರುವ ಕನಿಷ್ಠ ಪಿಂಚಣಿ (ರೂ.13500) ಹಾಗೂ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರದಿದ್ದಲ್ಲಿ, (ಸರ್ಕಾರದ ಮಟ್ಟದಲ್ಲಿ ಕಾಲಕಾಲಕ್ಕೆ ಅಳವಡಿಸಿಕೊಳ್ಳುವ ನಿಯಮಗಳನ್ನು ಒಳಗೊಂಡಂತೆ)

* ನಿಗಮದ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು, ದತ್ತು ಪಡೆದ ಮಕ್ಕಳು ಮತ್ತು ಮಲಮಕ್ಕಳನ್ನೊಳಗೊಂಡಂತೆ (25 ವರ್ಷ ವಯೋಮಿತಿ ಮೀರುವವರೆಗೆ ಅಥವಾ ವಿವಾಹವಾಗುವವರೆಗೆ ಯಾವುದು ಮೊದಲೋ ಅದನ್ನು ಪರಿಗಣಿಸುವುದು)

* ಅಂಧ/ ಚಲನ ವೈಕಲ್ಯ/ ಬುದ್ಧಿಮಾಂದ್ಯತೆ ಹೊಂದಿ, ನೌಕರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ವಿಶೇಷ ಚೇತನ ಮಕ್ಕಳು. (ಈ ಪ್ರಕರಣಗಳಲ್ಲಿ ವಯೋಮಿತಿ ಅನ್ವಯಿಸುವುದಿಲ್ಲ. ತತ್ಸಂಬಂಧ ನೌಕರನು ಸ್ವಯಂ ದೃಢೀಕರಣ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಪ್ರಮಾಣ ಪತ್ರ ಸಲ್ಲಿಸುವುದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+