KSRTC: ಬಸ್ಸಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರೇ ಎಚ್ಚರ, ಜನವರಿಯಲ್ಲಿ ಪತ್ತೆಯಾದ ಕೇಸ್-ದಂಡ ಎಷ್ಟು? ಪೂರ್ಣ ಮಾಹಿತಿ ಇಲ್ಲಿದೆ.
ಜನವರಿ ಒಂದೇ ತಿಂಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ 3,000 ಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಅಧಿಕಾರಿಗಳು ತಪ್ಪಿತಸ್ಥರಿಂದ ಭಾರಿ ಮೊತ್ತದ ದಂಡ ಸಂಗ್ರಹಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಆದಾಯದಲ್ಲಿ ಉಂಟಾಗುತ್ತಿದ್ದ ಸೋರಿಕೆಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಜನವರಿ ಒಂದೇ ತಿಂಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ 3,000 ಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಿದ ತನಿಖಾಧಿಕಾರಿಗಳು ಭಾರಿ ಮೊತ್ತದ ದಂಡವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ ಕಳೆದ ತಿಂಗಳು ಜನವರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಬಸ್‌ಗಳಲ್ಲಿ ಟಿಕೆಟ್ ಇಲ್ಲದೇ ಸಂಚರಿಸುತ್ತಿದ್ದ ಒಟ್ಟು 3269 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 46,047ವಾಹನಗಳನ್ನು ತನಿಖೆಗೊಳಪಡಿಸಿದ್ದಾರೆ. ತಪಾಸಣೆ ವೇಳೆ ಸಾವಿರಾರು ಪ್ರಕರಣಗಳು ಪತ್ತೆಯಾಗಿವೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮವು, ಒಟ್ಟು 3,682 ಟಿಕೇಟ್ ರಹಿತ ಪ್ರಯಾಣಿಕರಿಂದ ಒಂದೇ ತಿಂಗಳಲ್ಲಿ 5,83,396 ರೂಪಾಯಿ ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಿಕೆಟ್ ಪಡೆದು ಸಂಚಾರಕ್ಕೆ ಮನವಿ
ಕೆಎಸ್‌ಆರ್‌ಟಿಸಿಯು ರಾಜ್ಯದ ಮೂಲೆ ಮೂಲೆಗಳಲ್ಲಿ ಜನರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಸಂಚಾರ ಸೇವೆ ನೀಡುತ್ತಿದೆ. ಇಂತಹ ನಿಗಮಕ್ಕೆ ಆದಾಯದಲ್ಲಿ ಸೋರಿಕೆ ಉಂಟಾಗುತ್ತಿತ್ತು. ಇದರ ಪತ್ತೆಗೆ ಇಳಿದ ಅಧಿಕಾರಿಗಳು ಒಟ್ಟು ಸುಮಾರು 83,113/ ರೂಪಾಯಿಗಳ ಸೋರಿಕೆಯನ್ನು ತಪ್ತೆ ಮಾಡಿದ್ದರು.
ಸದ್ಯ ತಪಾಸಣೆ ವೇಳೆ ಸಿಕ್ಕಿಬಿದ್ದ ಪ್ರಕರಣಗಳು/ತಪ್ಪಿತಸ್ಥರ ವಿರುದ್ಧ ನಿಗಮದ ತನಿಖಾಧಿಕಾರಿಗಳು ನಿಯಮದಂತೆ ಸೂಕ್ತ ಶಿಸ್ತು ಕ್ರಮ ಜರುಗಿಸಿದ್ದಾರೆ. ಆದ್ದರಿಂದ ಸರ್ಕಾರಿ ಬಸ್ ಗಳಲ್ಲಿ ಸಂಚಾರಿಸುವ ಸಾರ್ವಜನಿಕರು, ಪ್ರಯಾಣಿಕರು ಸರಿಯಾದ ಸ್ಥಳಕ್ಕೆ ಕೇಳಿ ಟಿಕೇಟ್ ಇಲ್ಲವೇ ಅಗತ್ಯ ಪಾಸ್ ಪಡೆದು ಪ್ರಯಾಣ ಮಾಡಬೇಕು. ಇಲ್ಲವಾದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಮನವಿ ಮಾಡಿದೆ.












Click it and Unblock the Notifications