KSDL: 57 ಹೊಸ ಉತ್ಪನ್ನಗಳ ಬಿಡುಗಡೆ, ಐಕಾನಿಕ್ ಉತ್ಪನ್ನಗಳಿಗೆ ಭಾರೀ ಬೇಡಿಕೆ, ರಫ್ತು ಹೆಚ್ಚಳದ ಗುರಿ, ಹೊಸ ಯುಗ ಶುರು
ಬೆಂಗಳೂರು: ಕರುನಾಡಿನ ಐಕಾನಿಕ್ ಮತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ಉತ್ಪನ್ನ 'ಮೈಸೂರು ಸ್ಯಾಂಡಲ್ ಸೋಪ್' ಮತ್ತು ಕೆಎಸ್‌ಡಿಎಲ್ ಉತ್ಪನ್ನಗಳಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅವರ ಅಧಿಕೃತ ಘೋಷಣೆ ಜೊತೆಗೆ ಕೆಎಸ್‌ಡಿಎಲ್ ಸಂಸ್ಥೆಯ ಹೊಸ ರೂಪದ 57 ನವೀನ ಉತ್ಪನ್ನಗಳನ್ನು ನಟಿ ಬಿಡುಗಡೆ ಮಾಡಿದರು.
ನಗರದಲ್ಲಿ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಕೆಎಸ್‌ಡಿಎಲ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಯಭಾರಿ ನಟಿ ತಮನ್ನಾ ಸಂಸ್ಥೆಯ ಹೊಸ ಅಧ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹಾಗೂ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ನೇತೃತ್ವದಲ್ಲಿ ಕೆಎಸ್‌ಡಿಎಲ್ ಹೊಸ ಯುಗಕ್ಕೆ ಕಾಲಿಟ್ಟಿದೆ.

ಈ ಹೊಸ ಅಧ್ಯಾಯಕ್ಕೆ ಬಹುಭಾಷಾ ಬೆಡಗಿ ತಮನ್ನಾ ವಿಶೇವಾಗಿ ಸಿದ್ಧಪಡಿಸಿದ್ದ ವೇದಿಕೆ ಮೇಲೆ ಸಾಂಪ್ರದಾಯಿಕವಾಗಿ ಉಡುಗೆಯಲ್ಲಿ ಪ್ರತ್ಯಕ್ಷರಾದರು. ಹೊಚ್ಚಹೊಸ ಪ್ಯಾಕ್‌ನ ರೂಪ ತಾಳಿರುವ ಮೈಸೂರು ಸ್ಯಾಂಡಲ್ ಸೋಪ್ ಜತೆಗೆ ಸಂಸ್ಥೆಯ 57 ಉತ್ಪನ್ನಗಳನ್ನು ಅನಾವರಣಗೊಳಿಸಿದರು. ರಾಜ್ಯದ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲೂ ಬೇಡಿಕೆ ಇದೆ. ಈ ಕಾರಣದಿಂದಲೇ ಈ ಬಾರಿ ಅಧಿಕ ವಹೀವಾಟು ಮಾಡುವ ಗುರಿ ಹಾಕಿಕೊಳ್ಳಲಾಗಿದೆ.
ಸಾವಯವ ಸೇರಿ ನವೀನ ಉತ್ಪನ್ನಗಳು ಮಾರುಕಟ್ಟೆಗೆ
ನವನವೀನ ಪ್ಯಾಕಿಂಗ್ ಪಡೆದುಕೊಂಡಿರುವ ಉತ್ಪನ್ನಗಳಲ್ಲಿ ಗಂಧದ ಎಣ್ಣೆ, ಮಲ್ಲಿಗೆ (ಜಾಸ್ಮೀನ್) ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳಿವೆ. ಇದರೊಂದಿಗೆ ಕೆಎಸ್‌ಡಿಎಲ್‌ನ ಮುಂದಿನ ಹಾದಿ ಅಲ್ಲಿ ತೆರೆದುಕೊಂಡಿತು. ಜೊತೆಯಲ್ಲೇ ತಮನ್ನಾ ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆಯ ಇತಿಹಾಸವನ್ನು ಕಟ್ಟಿಕೊಡುವ 'ಸುಗಂಧ ಸಿರಿ' ಮತ್ತು 'ಅರೋಮ್ಯಾಟಿಕ್ ಜರ್ನೀಸ್' ಕಾಫಿ ಟೇಬಲ್ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.
ನಟಿ ತಮನ್ನಾ ಹೇಳಿದ್ದೇನು?
ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದ ನಟಿ ತಮನ್ನಾ ಮಾತನಾಡಿ, ಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ ಎಂದು ಉತ್ಪನ್ನಗಳ ಬಗ್ಗೆ ಬಣ್ಣಿಸಿದರು.
ಬಳಿಕ ಮಾತನಾಡಿದ ಸಚಿವ ಎಂಬಿ ಪಾಟೀಲ, 'ಕೆಎಸ್‌ಡಿಎಲ್ ಕೇವಲ ಸ್ಯಾಂಡಲ್ ಸೋಪ್‌ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಮಲ್ಲಿಗೆಯ ತೈಲ ಲೀಟರ್‌ಗೆ 4 ಲಕ್ಷ ರೂಪಾಯಿಗೂ ಜಾಸ್ತಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್‌ಗೆ 400 ರೂಪಾಯಿ ಇಟ್ಟಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಗಿ ಸಂಸ್ಥೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್‌ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ರಫ್ತು ಹೆಚ್ಚಿಸಲು ನೀಲನಕ್ಷೆ ಸಿದ್ಧ
ಕೆಎಸ್‌ಡಿಎಲ್ ಉತ್ಪನ್ನಗಳ ಪೈಕಿ ಸದ್ಯಕ್ಕೆ ಶೇಕಡ 1ರಷ್ಟು ಮಾತ್ರ ರಫ್ತಾಗುತ್ತಿದೆ. ಇದನ್ನು ಹೆಚ್ಚು ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್ ಇವೆ. ಪರಂಪರೆಯ ಮಹತ್ವವನ್ನು ಬಿಟ್ಟುಕೊಡದೆ ಸಮಕಾಲೀನ ಅಭಿರುಚಿಯನ್ನು ಇಲ್ಲಿ ಬೆಸೆದಿದ್ದೇವೆ ಎಂದು ಅವರು ನುಡಿದಿದ್ದಾರೆ.
ಆಧುನಿಕ ವಹಿವಾಟು ತಂತ್ರ ಅಳವಡಿಕೆ, ಲಾಭ
ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ಮುಟ್ಟಲಿದೆ. ಲಾಭವು 500 ಕೋಟಿ ರೂ. ದಾಟಲಿದೆ. ಇದಕ್ಕಾಗಿ ಆಧುನಿಕ ವಹಿವಾಟು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 3 ಕೋಟಿ ಫಾಲೋಯರ್ಸ್ ಹೊಂದಿರುವ, ಅಖಿಲ ಭಾರತ ಮಟ್ಟದ ವರ್ಚಸ್ಸಿರುವ ನಟಿ ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆ ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications