Mettur Dam: ಕೆಆರ್ಎಸ್, ಕಬಿನಿ ಮತ್ತು ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?
ಕಳೆದ ಕೆಲವು ದಿನಗಳಿಂದ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಬ್ಬರಿಸಿದ್ದ ಮಳೆ ಸದ್ಯ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೆಆರ್ ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದ್ದು, ಈ ವರ್ಷವಾದರೂ ಜಲಾಶಯಗಳು ತುಂಬಲಿ ಎಂದು ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದು ತಮಿಳುನಾಡಿಗೂ ಲಾಭವಾಗಿದೆ. ಮೆಟ್ಟೂರು ಜಲಾಶಯದ ಒಳಹರಿವು ಪ್ರಮಾಣದಲ್ಲಿ ಹೆಚ್ಚಾಗಿದ್ದು, ಮಳೆ ಚುರುಕಾದರೆ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ.

ಗುರುವಾರ ಮೆಟ್ಟೂರು ಜಲಾಶಯದ ಒಳಹರಿವು 4197 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. 1000 ಕ್ಯೂಸೆಕ್ಸ್ ನೀರನ್ನು ಕುಡಿಯುವ ನೀರಿಗಾಗಿ ಹೊರ ಬಿಡಲಾಗಿದೆ. 120 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 41.650 ಅಡಿ ನೀರು ಸಂಗ್ರಹವಾಗಿದೆ.
ಕೆಆರ್ ಎಸ್, ಕಬಿನಿ ಜಲಾಶಯದ ಸ್ಥಿತಿ ಏನು?
ಗುರುವಾರ ಕೆಆರ್ ಎಸ್ ಜಲಾಶಯದ ಒಳಹರಿವು 6146 ಕ್ಯೂಸೆಕ್ಸ್ ಆಗಿದ್ದು 1972 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 49.45 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 26.37 ಟಿಎಂಸಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯದ ಒಳಹರಿವು 5118 ಕ್ಯೂಸೆಕ್ಸ್ ಇದ್ದು 5000 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 19.52 ಟಿಎಂಸಿ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಸದ್ಯ 18.67 ಟಿಎಂಸಿ ನೀರು ಸಂಗ್ರಹವಾಗಿದೆ.
ತಮಿಳುನಾಡಿಗೆ ನೀರು ಹರಿಸಲು ಆದೇಶ
ಕಾವೇರಿ ವ್ಯಾಪ್ತಿಯ ರಾಜ್ಯದ ಜಲಾಶಯಗಳು ಬೇಗನೆ ತುಂಬುತ್ತವೆ ಎನ್ನುವ ನಿರೀಕ್ಷೆ ನಡುವೆಯೇ ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಆದೇಶ ನೀಡಿದೆ.
ಜುಲೈ 12 ರಿಂದ ಜುಲೈ 31ರವರೆಗೆ 19 ದಿನಗಳಲ್ಲಿ 19 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಬಿಳಿಗುಂಡ್ಲುವಿನಲ್ಲಿ 11,500 ಕ್ಯೂಸೆಕ್ಸ್ ನೀರು ಹರಿಯುವಂತೆ ನೋಡಿಕೊಳ್ಳಲು ಸೂಚನೆ ಕೊಟ್ಟಿದೆ. ಈಗಾಗಲೇ ಬಿಳಿಗುಂಡ್ಲುವಿನಲ್ಲಿ 5000 ಕ್ಯೂಸೆಕ್ಸ್ ಹರಿವು ಇದ್ದು, ಜಲಾಶಯಗಳಿಂದ ಇನ್ನಷ್ಟು ನೀರನ್ನು ಬಿಡುಗಡೆ ಮಾಡಬೇಕಾಗುತ್ತದೆ.












Click it and Unblock the Notifications