KRS Dam Water Level: ಮಳೆ.. ಮಳೆ.. ಕೆಆರ್‌ಎಸ್ & ಕಬಿನಿ ಸೇರಿದಂತೆ ಹಲವು ಡ್ಯಾಂಗಳಿಗೆ ಭರ್ಜರಿ ನೀರು!
ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಬಲು ಜೋರಾಗಿರುವ ಕಾರಣಕ್ಕೆ, ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಆಗುತ್ತಿದೆ. ಕಾವೇರಿ ಕೊಳ್ಳದ ಕೆಆರ್‌ಎಸ್ & ಕಬಿನಿ ಸೇರಿದಂತೆ, ತುಂಗಭದ್ರಾ, ಕೃಷ್ಣಾ ನದಿಯ ಆಲಮಟ್ಟಿ ಜಲಾಶಯಕ್ಕೆ ಕೂಡ ಭಾರಿ ಭರ್ಜರಿ ನೀರು ಹರಿದು ಬರುತ್ತಿದೆ. ಹಾಗಾದ್ರೆ ಇದೀಗ ಕರ್ನಾಟಕದ ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಮಟ್ಟ? ಬನ್ನಿ ತಿಳಿಯೋಣ.
ಮುಂಗಾರು ಮಳೆ ಚುರುಕಾದ ಕಾರಣಕ್ಕೆ ಕಳೆದ 2 ವಾರಗಳಿಂದ ಕೆಆರ್‌ಎಸ್, ಕಬಿನಿ ಸೇರಿ ಕರ್ನಾಟಕದ ಹಲವು ಡ್ಯಾಂಗಳು ಫುಲ್ ಆಗುತ್ತಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಈ ಸಮಯದಲ್ಲಿ ಭಾರಿ ಮಳೆ ಬರುತ್ತಿದ್ದು, ಡ್ಯಾಂಗಳು ತುಂಬಿಕೊಳ್ಳುತ್ತಿವೆ. ನದಿಯ ನೀರಿನಲ್ಲಿ ಭಾರಿ ಏರಿಕೆ ಕಂಡಿರುವ ಕಾರಣಕ್ಕೆ ನೀರು ಕೂಡ ಭರ್ತಿಯಾಗುತ್ತಿದೆ. ಹಾಗಾದ್ರೆ ಈಗ ಯಾವ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ ಎಂಬ ಮಾಹಿತಿಯನ್ನ ತಿಳಿಯೋಣ ಮುಂದೆ ಓದಿ.

ಕೆಆರ್‌ಎಸ್ ಜಲಾಶಯ ಫುಲ್?
ಕರ್ನಾಟಕದ ಪಾಲಿಗೆ ಕೆಆರ್‌ಎಸ್ ಜಲಾಶಯ ಯಾವಾಗಲೂ ಕೇಂದ್ರ ಬಿಂದು. ಯಾಕಂದ್ರೆ ತಮಿಳುನಾಡು ಕಾವೇರಿ ನೀರಿಗೆ ಕಿರಿಕ್ ತೆಗೆದಾಗ & ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಕೋಟ್ಯಂತರ ಜನರಿಗೆ ನೀರು ಸರಬರಾಜು ಮಾಡಲು ಇದೇ ಡ್ಯಾಂ ಆಧಾರವಾಗಿದೆ. ಅಲ್ಲದೆ ಕೆಆರ್‌ಎಸ್ ಡ್ಯಾಂಗೆ ಸರಿಯಾಗಿ ನೀರು ಬರದೇ ಹೋದರೆ ಸಮಸ್ಯ ದೊಡ್ಡದಾಗುತ್ತೆ.
ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಈ ಡ್ಯಾಂನಲ್ಲಿ ಸದ್ಯಕ್ಕೆ, 23.52 ಅಡಿ ನೀರು ಇದೆ. ಆದರೆ ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 10.26 ಟಿಎಂಸಿ ಅಡಿ ನೀರು ಇತ್ತು. ಸದ್ಯಕ್ಕೆ 6,185 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಹಾಗೇ ಮುಂದಿನ ವಾರ ಕೂಡ ಭರ್ಜರಿ ಮಳೆಯ ನಿರೀಕ್ಷೆ ಇದ್ದು, ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ.
ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?
ಕಾವೇರಿ ನದಿಗೆ ಕಟ್ಟಿರುವ ಪ್ರಮುಖ ಡ್ಯಾಂಗಳ ಪೈಕಿ ಕಬಿನಿ ಕೂಡ ಒಂದಾಗಿದೆ. ಈ ಜಲಾಶಯ ಚಿಕ್ಕದಾಗಿದ್ದರೂ ಕಾವೇರಿ ಕೊಳ್ಳದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. 19.52 ಟಿಎಂಸಿ ಅಡಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹ ಮಾಡಬಹುದು. ಇದೀಗ ಕಬಿನಿ ಡ್ಯಾಂನಲ್ಲಿ 17.83 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 5,509 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಇನ್ನೇನು ಕಬಿನಿ ಡ್ಯಾಂ ಭಾಗಶಃ ಭರ್ತಿ ಆಗಿದೆ. ಹಾಗೇ ಕಬಿನಿ ಡ್ಯಾಂಗೆ ಮುಂದಿನ ದಿನಗಳಲ್ಲಿ ಹೀಗೆಯೇ ಮತ್ತಷ್ಟು ನೀರು ಭರ್ಜರಿಯಾಗಿ ಹರಿದು ಬರುವ ನಿರೀಕ್ಷೆ ಕೂಡ ದಟ್ಟವಾಗಿದೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
ಕೃಷ್ಣಾ ನದಿ ಭಾರತದ ಬೃಹತ್ ನದಿಗಳ ಪೈಕಿ ಒಂದಾಗಿದೆ. ನೂರಾರು ಟಿಎಂಸಿ ನೀರನ್ನು ಪ್ರತಿವರ್ಷ ಈ ನದಿಯಲ್ಲಿ ಪಡೆಯಬಹುದು. ಹೀಗಾಗಿ ಕೃಷ್ಣಾ ನದಿಗೆ ಕರ್ನಾಟಕದಲ್ಲಿ ಬೃಹತ್ ಡ್ಯಾಂ ಕಟ್ಟಲಾಗಿದ್ದು, ಇದೀಗ ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಅತ್ತ ಮಹಾರಾಷ್ಟ್ರ ಕೂಡ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿದ್ದು, ಸದ್ಯಕ್ಕೆ ಜಲಾಶಯಕ್ಕೆ 62,073 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಈಗ 54.31 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 123.08 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯ ಜುಲೈ 2ನೇ ವಾರದಲ್ಲೇ ಭರ್ತಿಯಾಗುವ ನಿರೀಕ್ಷೆ ಇದೆ.












Click it and Unblock the Notifications