ಮತ್ತೊಂದು ಭ್ರಷ್ಟಚಾರದ ಸುಳಿಯಲ್ಲಿ KPSC ಆಯೋಗ: ಬರೋಬ್ಬರಿ 80 ಲಕ್ಷಕ್ಕೆ ಪಶು ವೈದ್ಯಾಧಿಕಾರಿ ಹುದ್ದೆ ಸೇಲ್?

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಈಗ ಮತ್ತೊಂದು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ಈಗಾಗಲೇ ಸ್ವಜನಪಕ್ಷಪಾತ ಹಾಗೂ ಅಕ್ರಮದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸರ್ಕಾರ ಅಮಾನತು ಮಾಡಿದೆ. ಇದರ ಬೆನ್ನಲ್ಲೇ, ಇದೀಗ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ನೇಮಕಾತಿಯಲ್ಲಿ ಶೇ. 60ರಷ್ಟು ಅಕ್ರಮ ನಡೆದಿದೆ ಎಂದು ಆರೋಪಿಸಿ ಹಗಲಿರುಳು ಕಷ್ಟಪಟ್ಟು ಓದಿ ಪಶು ವೈದ್ಯಾಧಿಕಾರಿ ಆಗಬೇಕು ಎನ್ನುವ ಆಕಾಂಕ್ಷಿಗಳು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: 80 ಲಕ್ಷಕ್ಕೆ ಹುದ್ದೆ ಸೇಲ್‌?

ರಾಜ್ಯದಲ್ಲಿ ಗ್ರೂಪ್-ಎ ವೃಂದದ ಒಟ್ಟು 400 ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗಾಗಿ ಕಳೆದ ಜನವರಿ 8ರಂದು ಕೆಪಿಎಸ್‌ಸಿ ಲಿಖಿತ ಪರೀಕ್ಷೆ ನಡೆಸಿತ್ತು. ಆದರೆ, ಇತ್ತೀಚೆಗೆ ಜುಲೈ 17ರಂದು ಪ್ರಕಟವಾದ ಫಲಿತಾಂಶವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದ ನೂರಾರು ಅಭ್ಯರ್ಥಿಗಳನ್ನ ತೀವ್ರ ಆತಂಕಕ್ಕೆ ದೂಡಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು, ಒಂದೊಂದು ಹುದ್ದೆಯನ್ನ ಬರೋಬ್ಬರಿ 80 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಣ ನೀಡಿದ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗಳನ್ನ ಮೀಸಲಿಡಲಾಗಿದೆ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KPSC

ವಿಧಾನಸೌಧ ಠಾಣೆಯಲ್ಲಿ ದೂರು

ಹಣದ ಆಮಿಷ ಹಾಗೂ ಅಕ್ರಮದ ಬಗ್ಗೆ ಮಾಹಿತಿ ಕಲೆಹಾಕಿದ 50ಕ್ಕೂ ಹೆಚ್ಚು ನೊಂದ ಅಭ್ಯರ್ಥಿಗಳು, ಒಗ್ಗೂಡಿ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪರೀಕ್ಷೆಯಲ್ಲಿ ತುಂಬ ಅವ್ಯವಹಾರ ನಡೆದಿರುವ ಕಾರಣ, ಕೂಡಲೇ ಈ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಗ್ರೂಪ್ ಎ ಹುದ್ದೆಯಾಗಿರುವ ಪಶು ವೈದ್ಯಾಧಿಕಾರಿಗಳ ಸೀಟ್‌ಗೆ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ 80 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಶಾಮೀಲು ಶಂಕೆ

ಈ ನೇಮಕಾತಿ ಹಗರಣದಲ್ಲಿಯೂ ಇತ್ತೀಚೆಗಷ್ಟೇ ಅಮಾನತ್ತಾಗಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಇತರ ಆಯೋಗದ ಸದಸ್ಯರ ಹೆಸರುಗಳು ತಳುಕುಹಾಕಿಕೊಂಡಿವೆ. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕಾಂತ್ ಕುಮಾರ್, "ಶಿವಶಂಕರಪ್ಪ ಸೇರಿದಂತೆ ಕೆಪಿಎಸ್‌ಸಿಯ ಹಲವು ಸದಸ್ಯರು ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದು, ಮಧ್ಯವರ್ತಿಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ" ಎಂದು ಆರೋಪಿಸಿದ್ದಾರೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.

"ಕೇಂದ್ರದ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾಗುವ ಮಟ್ಟದ ಪ್ರತಿಭಾವಂತ ಅಭ್ಯರ್ಥಿಗಳೇ ಇಲ್ಲಿ 300 ಅಂಕಗಳನ್ನು ದಾಟಲು ಪರದಾಡಿದ್ದಾರೆ. ಆದರೆ, ಶಿವಶಂಕರಪ್ಪ ಅವರ ಸಂಬಂಧಿಕರು ಅತಿ ಹೆಚ್ಚು ಅಂಕ ಗಳಿಸಿ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದು ಹೇಗೆ ಸಾಧ್ಯ?" ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಇಂತಹ ಭ್ರಷ್ಟಾಚಾರ ಎಸಗಿದವರಿಗೆ ಕೇವಲ ಅಮಾನತು ಶಿಕ್ಷೆ ಸಾಲದು, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಹಗಲಿರುಳು ಕಷ್ಟಪಟ್ಟು ಓದುವ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆಪಿಎಸ್‌ಸಿಯ ಈ ನಡೆಯಿಂದ ತೀವ್ರ ಅನ್ಯಾಯವಾಗುತ್ತಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬುದನ್ನಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+