KPSC ನೇಮಕಾತಿಯಲ್ಲಿ ಮತ್ತೊಂದು ಅಕ್ರಮ ಬಯಲು: ಅಭ್ಯರ್ಥಿಗಳ ಮಾಹಿತಿ ಮಾರಿಕೊಂಡ ಇಬ್ಬರು ಅಧಿಕಾರಿಗಳ ಬಂಧನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಸಾಲೊಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಅರ್ಹ ಅಭ್ಯರ್ಥಿಗಳ ಗೌಪ್ಯ ಮಾಹಿತಿಯನ್ನ ಸೋರಿಕೆ ಮಾಡಿದ ಆರೋಪದ ಮೇಲೆ ಕೆಪಿಎಸ್‌ಸಿಯ ಇಬ್ಬರು ಸಿಬ್ಬಂದಿಯನ್ನ ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಇದೀಗ ರಾಜ್ಯದ ಉದ್ಯೋಗಾಕಾಂಕ್ಷಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿಯ 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಹಾಗೂ ವಿವರಗಳನ್ನ ಆಯೋಗದ ಸಿಬ್ಬಂದಿಯೇ ಮಧ್ಯವರ್ತಿಗಳಿಗೆ ರಹಸ್ಯವಾಗಿ ರವಾನಿಸಿರುವುದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ತಾಂತ್ರಿಕ ಸಹಾಯಕ ಶರಣಪ್ಪ ಅಡವಳ್ಳಿ ಮತ್ತು ಹಿರಿಯ ಸಹಾಯಕ ಸ್ವಾಮಿದಾಸ್ ಎಂಬುವವರನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

KPSC

ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ, "ಪೊಲೀಸರಿಂದ ಲಿಖಿತ ವರದಿ ಬಂದ ತಕ್ಷಣವೇ ಬಂಧಿತ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗುವುದು. ಈ ಸಂಬಂಧ ಆಯೋಗ ತುರ್ತು ಸಭೆ ನಡೆಸಿ ಮುಂದಿನ ಕಠಿಣ ಕಾನೂನು ಕ್ರಮಗಳ ಕುರಿತು ಚರ್ಚಿಸಲಾಗಿದೆ" ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳ ದೂರು

ಕಿರಿಯ ಎಂಜಿನಿಯರ್ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ 'ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು' ಎಂಬ ಹೆಸರಿನಲ್ಲಿ ಆಯೋಗದ ಕಾರ್ಯದರ್ಶಿಗೆ ದೂರು ಹಾಗೂ ಸಾಕ್ಷ್ಯಾಧಾರಗಳು ಸಲ್ಲಿಕೆಯಾಗಿದ್ದವು. ಅರ್ಹ ಅಭ್ಯರ್ಥಿಗಳಿಗೆ ಕರೆ ಮಾಡುತ್ತಿದ್ದ ಮಧ್ಯವರ್ತಿಗಳು, 'ನಾವು ಕೆಪಿಎಸ್‌ಸಿ ಕಡೆಯವರು, ಲಕ್ಷಾಂತರ ರೂಪಾಯಿ ನೀಡಿದರೆ ನೌಕರಿ ಕೊಡಿಸುತ್ತೇವೆ' ಎಂದು ಬೇಡಿಕೆ ಇಟ್ಟಿದ್ದ ಆಡಿಯೋ ಮತ್ತು ವಾಟ್ಸ್‌ಆ್ಯಪ್ ದಾಖಲೆಗಳನ್ನ ಅಭ್ಯರ್ಥಿಗಳು ಒದಗಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಸಹಾಯಕ ಕಾರ್ಯದರ್ಶಿ ಬಿ.ಎನ್. ಶೋಭಾ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು.

ನಾಲ್ವರು ಮಧ್ಯವರ್ತಿಗಳ ಬಂಧನ

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು , ಮೊದಲಿಗೆ ಚಿಕ್ಕಮಗಳೂರಿನ ತರೀಕೆರೆ ಮೂಲದ ಎಂ. ಕೃಷ್ಣಮೂರ್ತಿ , ಚಿತ್ರದುರ್ಗದ ಚಳ್ಳಕೆರೆ ನಿವಾಸಿ ಎಂ.ಬಿ. ಅಂಗರಾಜು ಮತ್ತು ಹಾಸನದ ಹೊಳೆನರಸೀಪುರ ಮೂಲದ ಎಲ್.ಎಂ. ವಿಜಯ್ ಕುಮಾರ್ ಎಂಬ ಮೂವರು ಮಧ್ಯವರ್ತಿಗಳನ್ನು ಬಂಧಿಸಿದ್ದರು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನ ಚಂದ್ರಾಲೇಔಟ್ ನಿವಾಸಿ ತಿಮ್ಮಪ್ಪ ಅಲಿಯಾಸ್ ಸಣ್ಣತಿಮ್ಮಪ್ಪನ ಹೆಸರು ಬಹಿರಂಗವಾಗಿತ್ತು.

ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ, ಆಯೋಗದ ಒಳಗಿದ್ದುಕೊಂಡೇ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಶರಣಪ್ಪ ಮತ್ತು ಸ್ವಾಮಿದಾಸ್ ಅವರ ಕಳ್ಳಾಟ ಬಯಲಾಗಿದೆ.

ಜಲಸಂಪನ್ಮೂಲ ಇಲಾಖೆ ಪರೀಕ್ಷೆ ಮತ್ತು ನೇಮಕಾತಿ ಹಿನ್ನೆಲೆ

ಜಲಸಂಪನ್ಮೂಲ ಇಲಾಖೆಯಲ್ಲಿನ ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗದ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ 2025ರ ಮಾರ್ಚ್ 16ರಂದು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಗಸ್ಟ್ 16ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು.

2026ರ ಜನವರಿ 28ರಂದು 1:3ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ, ಫೆಬ್ರವರಿ 20ರಿಂದ 26ರವರೆಗೆ ಮೂಲ ದಾಖಲೆಗಳ ಪರಿಶೀಲನೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಸರಿಯಾಗಿ ಇದೇ ಸಮಯದಲ್ಲಿ ಮಧ್ಯವರ್ತಿಗಳು ಅರ್ಹ ಅಭ್ಯರ್ಥಿಗಳನ್ನ ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಕೆಪಿಎಸ್‌ಸಿ ಆಯೋಗದ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+