KAS Exam: ಡಿ. 29ಕ್ಕೆ ಕೆಎಎಸ್ ಪರೀಕ್ಷೆ, ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು, ಡಿಸೆಂಬರ್ 26: ಕೆಪಿಎಸ್‌ಸಿ ಡಿಸೆಂಬರ್ 29ರ ಭಾನುವಾರ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಮರು ಪರೀಕ್ಷೆಗಳನ್ನು ನಡೆಸಲಿದೆ. ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯ ಕುರಿತು ಸೂಚನೆಗಳನ್ನು ನೀಡಲಾಗಿದೆ. ಕೆಎಸ್ಆರ್‌ಟಿಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್ ನೀಡಿದೆ.
ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೇಷನರ್ 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯನ್ನು ಆಗಸ್ಟ್ 27ರಂದು ನಡೆಸಿತ್ತು. ಆದರೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಕಾರಣಕ್ಕೆ ಮರು ಪರೀಕ್ಷೆಯನ್ನು ಈಗ ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್ 29ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4ರ ತನಕ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿದೆ. ಪರೀಕ್ಷಾ ಕೇಂದ್ರಕ್ಕೆ ತೆರಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಈ ಕುರಿತು ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.
ಕೆಪಿಎಸ್‌ಸಿ ಪರೀಕ್ಷೆಗಳ ಕೇಂದ್ರಗಳು ಬೇರೆ-ಬೇರೆ ಜಿಲ್ಲೆಯಲ್ಲಿವೆ. ಆದ್ದರಿಂದ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.
ಹೆಚ್ಚುವರಿ ಬಸ್ ವ್ಯವಸ್ಥೆ: ಹೆಚ್ಚುವರಿ ಬಸ್ ವ್ಯವಸ್ಥೆ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ಎಲ್ಲಾ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ. ರಾ. ರ. ಸಾ. ನಿಗಮ ಇವರಿಗೆ ಪತ್ರವನ್ನು ಬರೆದಿದ್ದಾರೆ.
ಈ ಪತ್ರ ದಿನಾಂಕ 29.12.2024ರಂದು ಕರ್ನಾಟಕ ಲೋಕಸೇವಾ ಆಯೋಗದ 2023-24ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಪೂರ್ವಭಾವಿ ಪರೀಕ್ಷೆ ಹಿನ್ನೆಲೆಯಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಮುಖ್ಯಮಂತ್ರಿಗಳ ಕಛೇರಿಯ ಸೂಚನೆ ಉಲ್ಲೇಖಿಸಲಾಗಿದೆ.
ಈ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ದಿನಾಂಕ 29.12.2024 ರಂದು ಕರ್ನಾಟಕ ಲೋಕಸೇವಾ ಆಯೋಗದ 2023-24ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಪೂರ್ವಭಾವಿ ಪರೀಕ್ಷೆ ನಡೆಸಲಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿರುವಂತಹ ಸುಮಾರು ಅಭ್ಯರ್ಥಿಗಳಿಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲಾಗಳಾದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಪರೀಕ್ಷೆ ಕೇಂದ್ರಗಳನ್ನು ಗುರುತಿಸಲಾಗಿದೆ.
ನಿಗದಿತ ಸಮಯದೊಳಗೆ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಎಕ್ಸ್ ಖಾತೆ ಮೂಲಕ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸುಮಾರು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದು ತ್ವರಿತಗತಿಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನಿಯಮಾನುಸಾರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಸನ್ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಕೋರಿರುತ್ತಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಅದರಂತೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಅಡಚಣೆಯಾಗದಂತೆ ಸದರಿ ದಿನಗಳಂದು ವಿಭಾಗದ ವತಿಯಿಂದ ಪ್ರಮುಖ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಪರೀಕ್ಷೆ ನಡೆಯುವ ಕೇಂದ್ರ ಸ್ಥಾನ ಸ್ಥಳಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮಕೈಗೊಳ್ಳುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.












Click it and Unblock the Notifications