Breaking; KSET ಪರೀಕ್ಷೆ KEA ಮೂಲಕ ನಡೆಸುವ ಕುರಿತು ಆದೇಶ
ಬೆಂಗಳೂರು, ಡಿಸೆಂಬರ್ 23; ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವ ಕುರಿತು ಆದೇಶ ಹೊರಡಿಸಿದೆ.
ಶುಕ್ರವಾರ ಶೀತಲ್ ಎಂ. ಹಿರೇಮಠ ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಗಳು-1) ಇವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಸೆಟ್ ಪರೀಕ್ಷೆ ನಡೆಸಿರುವ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗವು 19/12/2019ರಂದು ನಡೆದ ಸಭೆಯಲ್ಲಿ ಮಾನ್ಯತೆ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಕರ್ನಾಟಕ ರಾಜ್ಯದ ಪರವಾಗಿ 3 KSET ಪರೀಕ್ಷೆಗಳನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ನೀಡಲು ನಿರ್ಧರಿಸಿ, 41 ವಿಷಯಗಳಲ್ಲಿ 14/01/2020ರಿಂದ 3 ವರ್ಷಗಳವರೆಗೆ (ಪ್ರತಿ ವರ್ಷ 1 ಬಾರಿಗೆ) ಕೆ-ಸೆಟ್ ಪರೀಕ್ಷೆಯನ್ನು ನಡೆಸಲು ಮಾನ್ಯತೆಯನ್ನು ನೀಡಿರುತ್ತದೆ.

2022ನೇ ಶೈಕ್ಷಣಿಕ ಸಾಲಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ರಾಜ್ಯ ನೋಡಲ್ ಏಜೆನ್ಸಿಗಳಿಗೆ ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಲಾಗಿರುತ್ತದೆ.
ಆದರೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಜುಲೈ-2021 ರಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಗೂ ಈ ಪ್ರಕ್ರಿಯೆಗೆ ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷೆಯ ಸಂಯೋಜಕರು ಹಾಗೂ ಇತರರು ಸಂಪೂರ್ಣ ಹೊಣೆಗಾರರೆಂದು ದೂರುಗಳು ಬಂದಿದ್ದು, ಈ ಬಗ್ಗೆ ಪ್ರತ್ಯೇಕ ತನಿಖೆಗೆ ಸಮಿತಿ ರಚಿಸಿ ಆದೇಶಿಸಲಾಗಿದೆ.
ಈ ರೀತಿ ಅವ್ಯವಹಾರಗಳು ನಡೆದಲ್ಲಿ ಅರ್ಹತೆಯಿರುವ/ ಪ್ರತಿಭಾವಂತ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುವುದರಿಂದ ಹಾಗೂ ಮುಂಬರುವ ಯುವ ಪೀಳಿಗೆಗೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೇ ಇರುವುದರಿಂದ, ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ತರಲು ಕೆ-ಸೆಟ್ ಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆ ನಡೆಸುವುದು ಸೂಕ್ತವಾಗಿರುತ್ತದೆಯೇ ಹೊರತು ಯಾವುದೇ ವಿಶ್ವವಿದ್ಯಾಲಯದಿಂದಲ್ಲ ಎಂಬುದನ್ನು ಸರ್ಕಾರ ಮನಗಂಡಿದೆ.
ಈ ಹಿನ್ನೆಲೆಯಲ್ಲಿ 2022ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮೂಲಕ ನಡೆಸಲು ತೀರ್ಮಾನಿಸಿ, ಅದರಂತೆ ಈ ಆದೇಶ ಹೊರಡಿಸಲಾಗಿದೆ.
17/12/2022ರಂದು ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ರಾಜ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಯುಜಿಸಿಯ ಪರಿಕಲ್ಪನೆ ಮತ್ತು ವ್ಯಾಪ್ತಿಯಡಿ ರಾಜ್ಯ ಸರ್ಕಾರವು ಒಂದು ಏಜೆನ್ಸಿಯನ್ನು ಗುರುತಿಸಬಹುದು, ಅದು ವಿಶ್ವವಿದ್ಯಾನಿಲಯವಾಗಿರಬಹುದು ಅಥವಾ ಪ್ರತಿಷ್ಠಿತ ಪರೀಕ್ಷಾ ಸಂಸ್ಥೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರತಿಷ್ಠಿತ ಸಂಸ್ಥೆಯಾಗಿರಬಹುದು.
ಈ ಅವಕಾಶದಡಿ 2022ನೇ ಸಾಲನ್ನು ಒಳಗೊಂಡಂತೆ ಮುಂದಿನ ಆದೇಶದವರೆಗೆ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವಂತೆ ಆದೇಶಿಸಲಾಗಿದೆ.












Click it and Unblock the Notifications