ವೃತ್ತಿಪರ ಕೋರ್ಸ್‌ಗಳಿಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದ ಕೆಇಎ
ಬೆಂಗಳೂರು, ಜೂನ್ 28: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಬುಧವಾರ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದೆ.
32 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ 12,586 ಸೀಟುಗಳು ಲಭ್ಯವಿದೆ. ಇದರಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 10,424, ಹೈದರಾಬಾದ್ ಕರ್ನಾಟಕ ಮೀಸಲಾತಿ ಅಭ್ಯರ್ಥಿಗಳಿಗೆ 1666 ಹಾಗೂ ವಿಶೇಷ ಕೋಟಾದ ಅಭ್ಯರ್ಥಿಗಳಿಗೆ 496 ಸೀಟು ಮೀಸಲಿಡಲಾಗಿದೆ.
ಆರ್ಕಿಟೆಕ್ಚರ್‌ನಲ್ಲಿ 114 ಸೀಟು, ಬಿಎಸ್ಸಿ ಎಜಿ, ಕೃಷಿ ಹಾಗೂ ಪಶು ಸಂಗೋಪನೆ, ತೋಟಗಾರಿಕೆ ಮತ್ತಿತರ ಕೋರ್ಸ್‌ಗಳಿಗೆ 2847 ಸೀಟುಗಳು ಲಭ್ಯವಿವೆ. ಸದ್ಯದಲ್ಲಿಯೇ ಶುಲ್ಕ ವಿವರ ಹಾಗೂ ಆಪ್ಷನ್ ಎಂಟ್ರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಖಾಸಗಿ ಕಾಲೇಜುಗಳಲ್ಲಿನ ಸರಕಾರಿ ಕೋಟಾದ ಎಂಜಿನಿಯರಿಂಗ್ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಖಾಸಗಿ ಕಾಲೇಜಿನ ಆಡಳಿತ ಮಂಡಳಿಗಳು ಹಾಗೂ ಸರಕಾರದ ನಡುವೆ ಎರಡು-ಮೂರು ಸುತ್ತಿನ ಮಾತುಕತೆ ನಡೆದರೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಒಂದೆರಡು ದಿನಗಳಲ್ಲಿ ಸರಕಾರ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications