PGCET 2026: MBA, MCA ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಆಪ್ಷನ್ ಬದಲಾವಣೆಗೆ ಸೆಪ್ಟೆಂಬರ್ 22 ಕೊನೆ ದಿನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2026ನೇ ಸಾಲಿನ ಪಿಜಿಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನ ನೀಡಿದೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಹಾಗೂ ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಇದೀಗ ಪ್ರಕಟವಾಗಿದೆ.
ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KEA ಪ್ರಕಟಣೆ: ಆಪ್ಷನ್ ಬದಲಾವಣೆಗೆ ಸೆಪ್ಟೆಂಬರ್ 22 ಕೊನೆಯ ದಿನ
ತಮ್ಮ PGCET 2026 ಅಣಕು ಸೀಟು ಹಂಚಿಕೆ ಫಲಿತಾಂಶವನ್ನ ಪರಿಶೀಲಿಸಿದ ನಂತರ, ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಗಳನ್ನ ಮರುಪರಿಶೀಲಿಸಿ, ಪರಿಷ್ಕರಿಸಲು ಪ್ರಾಧಿಕಾರವು ಅವಕಾಶ ಕಲ್ಪಿಸಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ತಾವು ಆಯ್ಕೆ ಮಾಡಿದ್ದ ಕಾಲೇಜುಗಳ ಆದ್ಯತಾ ಕ್ರಮವನ್ನ (Priority order) ಬದಲಾಯಿಸಬೇಕಿದ್ದಲ್ಲಿ, ಹೊಸ ಕಾಲೇಜುಗಳನ್ನ ಪಟ್ಟಿಗೆ ಸೇರಿಸಬೇಕಿದ್ದಲ್ಲಿ ಅಥವಾ ಬೇಡವಾದ ಕಾಲೇಜುಗಳನ್ನು ತೆಗೆದು ಹಾಕಬೇಕಿದ್ದರೆ ಸೆಪ್ಟೆಂಬರ್ 22ರ ಬೆಳಿಗ್ಗೆ 11 ಗಂಟೆಯವರೆಗೆ ಸಮಯಾವಕಾಶ ನೀಡಲಾಗಿದೆ.
ಈ ಕುರಿತಾದ ಕೆಇಎ ಪ್ರಕಟಣೆಯಲ್ಲಿ ಮತ್ತೊಂದು ಮುಖ್ಯ ವಿಚಾರವನ್ನು ತಿಳಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಆಪ್ಷನ್ ದಾಖಲಿಸದೇ ಇರುವ ಅರ್ಹ ಅಭ್ಯರ್ಥಿಗಳಿಗೂ ಸಹ ಹೊಸದಾಗಿ ಆಪ್ಷನ್ ದಾಖಲಿಸಲು ಕೆಇಎ ಅವಕಾಶ ನೀಡಿದೆ. ಪ್ರಕ್ರಿಯೆ ಮುಗಿದ ಬಳಿಕ ಅಭ್ಯರ್ಥಿಗಳು ಅಂತಿಮವಾಗಿ ಸೇವ್ ಮಾಡಿದ ಆಪ್ಷನ್ ಪಟ್ಟಿಯ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳುವುದು ಮುಖ್ಯ.
ಆಪ್ಷನ್ ಎಂಟ್ರಿ ನಿಯಮಗಳು: ಒಮ್ಮೆ ಮಾತ್ರ ಆಯ್ಕೆ ದಾಖಲಿಸಲು ಅವಕಾಶ
ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕೆಇಎ ಬಿಡುಗಡೆ ಮಾಡಿರುವ ಆಪ್ಷನ್ ಎಂಟ್ರಿ ನಿಯಮಗಳು ಕಟ್ಟುನಿಟ್ಟಾಗಿವೆ. ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕೇವಲ "ಒಂದು ಬಾರಿ ಮಾತ್ರ ಆಪ್ಷನ್ / ಆಯ್ಕೆಯನ್ನ" ದಾಖಲಿಸಲು ಅವಕಾಶವಿರುತ್ತದೆ.
ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ನೀವು ಯಾವ ಆದ್ಯತಾ ಕ್ರಮದಲ್ಲಿ ಕಾಲೇಜುಗಳನ್ನು ದಾಖಲಿಸುತ್ತೀರೋ, ಮುಂದಿನ ಎಲ್ಲಾ ಸುತ್ತುಗಳಿಗೂ ಅದೇ ಆಯ್ಕೆಗಳನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ. ಎರಡನೇ ಅಥವಾ ಆ ನಂತರದ ಸುತ್ತುಗಳಲ್ಲಿ ಹೊಸದಾಗಿ ಬೇರೆ ಕಾಲೇಜುಗಳನ್ನು ಸೇರಿಸಲು ಯಾವುದೇ ಅವಕಾಶ ಇರುವುದಿಲ್ಲ.
ಬದಲಿಗೆ, ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ಚಾಯ್ಸ್ ಆಧಾರದ ಮೇಲೆ ಕಾಲೇಜುಗಳನ್ನ ಪಟ್ಟಿಯಿಂದ ಕೇವಲ ಡಿಲೀಟ್ ಮಾಡಲು ಅಥವಾ ಕ್ರಮಾಂಕ ಬದಲಾಯಿಸಲು ಮಾತ್ರ ಅವಕಾಶವಿರಲಿದೆ. ಹೀಗಾಗಿ, ಅಂತಿಮವಾಗಿ ಆಪ್ಷನ್ ಗಳನ್ನ ಸಬ್ಮಿಟ್ ಮಾಡುವ ಮುನ್ನ, ಆಯಾ ಕಾಲೇಜುಗಳ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಖಚಿತಪಡಿಸಿಕೊಂಡು ಆದ್ಯತಾ ಕ್ರಮದಲ್ಲಿ ನಮೂದಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
ಎಂಬಿಎ ಎಂಸಿಎ ಪ್ರವೇಶ: ಅಣಕು ಸೀಟು ಹಂಚಿಕೆ ಎಂದರೇನು?
ಸದ್ಯ ಕೆಇಎ ಪ್ರಕಟಿಸಿರುವ ಈ ಫಲಿತಾಂಶ ಕೇವಲ ಒಂದು ಸಾಂಕೇತಿಕ ಸೀಟು ಹಂಚಿಕೆ ಪ್ರಕ್ರಿಯೆಯಾಗಿದೆ. ಎಂಬಿಎ ಎಂಸಿಎ ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಹಿಂದೆ ದಾಖಲಿಸಿದ್ದ ಆಪ್ಷನ್ಸ್, ಅವರ ಮೆರಿಟ್ ಹಾಗೂ ರೋಸ್ಟರ್ ಪದ್ಧತಿಯನ್ನ ಆಧರಿಸಿ ಈ ಅಣಕು ಸೀಟು ಹಂಚಿಕೆಯನ್ನ ಮಾಡಲಾಗಿದೆ.
ಇಲ್ಲಿ ಗಮನಿಸಬೇಕಾದ ಅತಿ ಮುಖ್ಯ ಅಂಶವೆಂದರೆ, ಈ ಅಣಕು ಹಂಚಿಕೆಯಲ್ಲಿ ಸಿಕ್ಕಿರುವ ಕಾಲೇಜಿನ ಸೀಟು, ರಿಯಲ್ ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲೂ ಕಡ್ಡಾಯವಾಗಿ ಸಿಗುತ್ತದೆ ಎಂಬ ಯಾವುದೇ ಖಾತರಿ ಇರುವುದಿಲ್ಲ. ಏಕೆಂದರೆ, ಈ ಅಣಕು ಫಲಿತಾಂಶ ನೋಡಿದ ನಂತರ ಸಾವಿರಾರು ವಿದ್ಯಾರ್ಥಿಗಳು ತಮ್ಮ ಆಪ್ಷನ್‌ಗಳನ್ನ ಬದಲಾಯಿಸುತ್ತಾರೆ ಅಥವಾ ಹೊಸ ಕಾಲೇಜುಗಳನ್ನ ಸೇರಿಸುತ್ತಾರೆ.
ಇದರಿಂದ ಅಂತಿಮ ರ್ಯಾಂಕಿಂಗ್ ಲೆಕ್ಕಾಚಾರ ಬದಲಾಗುತ್ತದೆ. ಆದ್ದರಿಂದ, ಈ ಫಲಿತಾಂಶವನ್ನ ಆಧಾರವಾಗಿಟ್ಟುಕೊಂಡು ಯಾವುದೇ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ನಿಜವಾದ ಫಲಿತಾಂಶ ಬರುವವರೆಗೂ ಅಭ್ಯರ್ಥಿಗಳು ಕಾಯಲೇಬೇಕಾಗುತ್ತದೆ. ಇದು ಕೇವಲ ಅಭ್ಯರ್ಥಿಗಳಿಗೆ ಕಾಲೇಜುಗಳ ಲಭ್ಯತೆಯ ಬಗ್ಗೆ ಒಂದು ಅಂದಾಜು ನೀಡುವ ಪ್ರಕ್ರಿಯೆ ಮಾತ್ರ.


Click it and Unblock the Notifications
