KEA ಭೂಮಾಪಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 560 ಭೂಮಾಪಕರ (ಲ್ಯಾಂಡ್ ಸರ್ವೇಯರ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಸಿಹಿಸುದ್ದಿಯೊಂದನ್ನಾ ನೀಡಿದೆ. ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ ಕನಿಷ್ಠ ವಿದ್ಯಾರ್ಹತೆಯಲ್ಲಿ ಮಹತ್ವದ ತಿದ್ದುಪಡಿ ಮಾಡಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನ ವಿಸ್ತರಿಸಿದೆ.
ಕೆಇಎ ಭೂಮಾಪಕರ ನೇಮಕಾತಿ 2026: ಅರ್ಜಿ ಸಲ್ಲಿಕೆಗೆ ಹೊಸ ದಿನಾಂಕಗಳು
ಈ ಹಿಂದೆ ಅಧಿಸೂಚನೆಯಲ್ಲಿ ಹೊರಡಿಸಿದ್ದ ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ಗಡುವನ್ನ ವಿಸ್ತರಿಸಲಾಗಿದೆ. ವಿದ್ಯಾರ್ಹತೆಯಲ್ಲಿ ಬದಲಾವಣೆ ಮಾಡಿರುವುದರಿಂದ ಹೆಚ್ಚು ಅಭ್ಯರ್ಥಿಗಳಿಗೆ ಅನುಕೂಲವಾಗಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 20, 2026 ರವರೆಗೆ ಅವಕಾಶ ನೀಡಲಾಗಿದೆ. ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಲು ಆಗಸ್ಟ್ 21, 2026 ಕೊನೆಯ ದಿನವಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಎಸ್ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಪರಿಷ್ಕೃತ ನಿಯಮಗಳೇನು?
ಸರ್ಕಾರದ ಹೊಸ ತಿದ್ದುಪಡಿಯ ಪ್ರಕಾರ, ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೂ ಕನಿಷ್ಠ ವಿದ್ಯಾರ್ಹತೆಯನ್ನ ಹೊಂದಿರಬೇಕು:
ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ಪದವಿ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ (BE ಅಥವಾ B.Tech) ಅಥವಾ ಎಎಂಐಇ (AMIE) ಪದವಿ ಪಡೆದಿರಬೇಕು.
ಬಿಎಸ್‌ಸಿ ಪದವಿ : ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇನ್ಸ್ಟ್ರುಮೆಂಟೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ ಅಥವಾ ರೇಷ್ಮೆ ವಿಭಾಗಗಳಲ್ಲಿ ಬಿಎಸ್‌ಸಿ ಪದವಿ ಹೊಂದಿರಬೇಕು.
ಡಿಪ್ಲೋಮಾ ಅರ್ಹತೆ: ಎಐಸಿಟಿಇ (AICTE) ಮಾನ್ಯತೆ ಪಡೆದ ಸಂಸ್ಥೆಯಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದ ಯಾವುದೇ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಬಿಎಸ್‌ಸಿ ಹಾಗೂ ಆನರ್ಸ್ ಪದವೀಧರರಿಗೆ ವಿಶೇಷ ಅವಕಾಶ
ಹೊಸ ತಿದ್ದುಪಡಿಯ ಮುಖ್ಯ ಅಂಶವೆಂದರೆ, ಬಿಎಸ್‌ಸಿ ಪದವಿಯಲ್ಲಿ ಗಣಿತ ಅಥವಾ ಭೌತಶಾಸ್ತ್ರಗಳಲ್ಲಿ ಕನಿಷ್ಠ ಒಂದು ವಿಷಯವನ್ನ ಮುಖ್ಯ ವಿಷಯವಾಗಿ ಅಭ್ಯಾಸ ಮಾಡಿರುವವರು ಹಾಗೂ ಆನರ್ಸ್ ಮುಖಾಂತರ ಬಿಎಸ್‌ಸಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೂ ಈಗ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಾವಿರಾರು ವಿಜ್ಞಾನ ಪದವೀಧರರಿಗೆ ಸರ್ಕಾರಿ ಉದ್ಯೋಗ ಪಡೆಯುವ ಭರವಸೆ ಮೂಡಿದೆ.
ಪ್ರಮುಖ ಮಾಹಿತಿ
1. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
2. ವಿದ್ಯಾರ್ಹತೆಯ ಬದಲಾವಣೆ ಮತ್ತು ದಿನಾಂಕ ವಿಸ್ತರಣೆಯನ್ನ ಹೊರತುಪಡಿಸಿ, ವಯೋಮಿತಿ, ಮೀಸಲಾತಿ ಹಾಗೂ ಆಯ್ಕೆ ಪ್ರಕ್ರಿಯೆ ಸೇರಿದಂತೆ ಮೂಲ ಅಧಿಸೂಚನೆಯಲ್ಲಿನ ಇತರೆ ಯಾವುದೇ ನಿಯಮಗಳಲ್ಲಿ ಬದಲಾವಣೆ ಇಲ್ಲ.
3. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
4. ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಹಾಗೂ ಪರೀಕ್ಷಾ ಕೇಂದ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ಜಾಲತಾಣವನ್ನ ನೋಡಿ.
ತೋಟಗಾರಿಕೆ ಇಲಾಖೆಯ ಹುದ್ದಗಳಿಗೆ ಅರ್ಜಿ ಆಹ್ವಾನ
ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ.
ಉಳಿಕೆ ಮೂಲ ವೃಂದದಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕರ ಐದು ಹುದ್ದೆ ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ದರ್ಜೆಯಲ್ಲಿ 75 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಐದು ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಆ.31 ಕೊನೆಯ ದಿನ.


Click it and Unblock the Notifications
