Karnataka Weather: ಶುರುವಾಯ್ತು ಚಳಿ, ಬಿಸಿಲಿನ ಕಣ್ಣಾಮುಚ್ಚಾಲೆ: ರಾಜ್ಯದಲ್ಲಿ ಇಂದು ಹೇಗಿದೆ ಹವಾಮಾನ?
ಬೆಂಗಳೂರು: ನವೆಂಬರ್ ತಿಂಗಳ ಮಧ್ಯಭಾಗಕ್ಕೆ ಕಾಲಿಡುತ್ತಿದ್ದಂತೆಯೇ ರಾಜ್ಯದ ಹವಾಮಾನದಲ್ಲಿ ಭಾರಿ ಬದಲಾವಣೆಗಳು ಕಂಡುಬರುತ್ತಿವೆ. ಮಳೆಯ ಅಬ್ಬರ ಸಂಪೂರ್ಣವಾಗಿ ತಗ್ಗಿದ್ದು, ಇದೀಗ ವಿಭಿನ್ನ ಅನುಭವ ಜನರಿಗೆ ಆಗುತ್ತಿದೆ. ನವೆಂಬರ್ 14, 2026ರ ಹವಾಮಾನ ವರದಿ ಪ್ರಕಾರ, ರಾಜ್ಯದಾದ್ಯಂತ ಬಹುತೇಕ ಒಣ ಹವೆ ಮುಂದುವರಿದಿದೆ.
ಒಂದೆಡೆ ರಾತ್ರಿ ಮತ್ತು ಮುಂಜಾನೆ ಹಿತವಾದ ಚಳಿ ಕೊರೆಯುತ್ತಿದ್ದರೆ, ಮತ್ತೊಂದೆಡೆ ಮಧ್ಯಾಹ್ನದ ಹೊತ್ತಿಗೆ ಸುಡು ಬಿಸಿಲಿನ ಬೇಗೆಗೆ ರಾಜ್ಯದ ಜನತೆ ಕಂಗಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ಹಾಗೂ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಮುಂಜಾನೆ ಚಳಿ: ಹೇಗಿದೆ ಬೆಂಗಳೂರು ಹವಾಮಾನ?
ರಾಜಧಾನಿ ಬೆಂಗಳೂರಿನಲ್ಲಿ ಚಳಿಗಾಲದ ವಾತಾವರಣ ನಿಧಾನವಾಗಿ ಕಳೆಗಟ್ಟುತ್ತಿದೆ. ಶನಿವಾರ (ನವೆಂಬರ್ 14) ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದ್ದರೆ, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ಹವಾಮಾನ ಇಲಾಖೆಯ ಮಾಹಿತಿಯಂತೆ, ಶುಕ್ರವಾರ ಬೆಳಿಗ್ಗೆ ಬೆಂಗಳೂರು ನಗರದಲ್ಲಿ 16.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.ಹಗಲಿನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇತ್ತು. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಯಾವುದೇ ಮಳೆಯಾಗಿಲ್ಲ. ಉತ್ತರ ದಿಕ್ಕಿನಿಂದ ಬೀಸುತ್ತಿರುವ ತಂಪಾದ ಗಾಳಿಯಿಂದಾಗಿ ಐಟಿ ಸಿಟಿಯ ಜನರಿಗೆ ರಾತ್ರಿಯ ವೇಳೆ ಚಳಿ ಶುರುವಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಕನಿಷ್ಠ 15.2 ಡಿಗ್ರಿ ಹಾಗೂ ಗರಿಷ್ಠ 28.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜ್ಯದ ಪ್ರಮುಖ ನಗರಗಳ ಇಂದಿನ ಹವಾಮಾನ
ರಾಜ್ಯದ ಇತರ ಪ್ರಮುಖ ನಗರಗಳ ಹವಾಮಾನ ಗಮನಿಸಿದರೆ, ಕನಿಷ್ಠ ಮತ್ತು ಗರಿಷ್ಠ ತಾಪಮಾನದ ನಡುವೆ ಭಾರಿ ಅಂತರ ಕಂಡುಬರುತ್ತಿದೆ. ಬೆಳಗಾವಿಯಲ್ಲಿ ರಾಜ್ಯದಲ್ಲೇ ಅತಿ ಕಡಿಮೆ ಅಂದರೆ 12.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಅಂದರೆ ಸಾಮಾನ್ಯಕ್ಕಿಂತ 4 ಡಿಗ್ರಿ ಕಡಿಮೆ ದಾಖಲಾಗಿದೆ. ಅದೇ ರೀತಿ ಗದಗದ ಕನಿಷ್ಠ ತಾಪಮಾನ 13.4 ಡಿಗ್ರಿಗೆ ಕುಸಿದಿದೆ. ಕರಾವಳಿ ಭಾಗವಾದ ಹೊನ್ನಾವರದಲ್ಲಿ ರಾಜ್ಯದಲ್ಲೇ ಗರಿಷ್ಠ ಎನ್ನಬಹುದಾದ 34.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಮಂಗಳೂರು: ಕನಿಷ್ಠ 21.4 °C | ಗರಿಷ್ಠ 33.8 °C
ಕಲಬುರಗಿ: ಕನಿಷ್ಠ 18.0 °C | ಗರಿಷ್ಠ 33.8 °C
ಮೈಸೂರು: ಕನಿಷ್ಠ 17.6 °C | ಗರಿಷ್ಠ 31.2 °C
ಮುಂದಿನ 7 ದಿನಗಳ ಹವಾಮಾನ ಇಲಾಖೆ ಮುನ್ಸೂಚನೆ
ಬಿಸಿಲು ಹಾಗೂ ಚಳಿಯ ಈ ಕಣ್ಣಾಮುಚ್ಚಾಲೆ ಆಟ ಮುಂದಿನ ಕೆಲವು ದಿನಗಳ ಕಾಲ ಹೀಗೆಯೇ ಮುಂದುವರಿಯಲಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ 7 ದಿನಗಳ ಕಾಲ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಸಂಪೂರ್ಣವಾಗಿ ಒಣ ಹವೆ ಇರಲಿದೆ. ಎಲ್ಲಿಯೂ ಭಾರಿ ಮಳೆಯಾಗುವ ಮುನ್ಸೂಚನೆಯಾಗಲಿ ಅಥವಾ ಹವಾಮಾನ ಎಚ್ಚರಿಕೆಗಳಾಗಲಿ ಇಲ್ಲ.
ಒಟ್ಟಾರೆಯಾಗಿ, ಮಧ್ಯಾಹ್ನದ ವೇಳೆ ಹೊರಗೆ ಓಡಾಡುವವರಿಗೆ ಬಿಸಿಲಿನ ಕಾಟ ತಪ್ಪಿದ್ದಲ್ಲವಾದರೂ, ರಾತ್ರಿ ಹಾಗೂ ಮುಂಜಾನೆ ಮನೆಯಿಂದ ಹೊರಬರುವಾಗ ಸ್ವೆಟರ್ ಅಥವಾ ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಅನಿವಾರ್ಯವಾಗಿದೆ. ಬೆಳಗಿನ ಚಳಿಯ ನಡುವೆಯೂ ಮಳೆಯ ಭೀತಿ ಇಲ್ಲದಿರುವುದು ಸಾರ್ವಜನಿಕರ ದಿನನಿತ್ಯದ ಓಡಾಟಕ್ಕೆ ಹಾಗೂ ಕೃಷಿಕರ ಕಟಾವು ಕಾರ್ಯಗಳಿಗೆ ಅತ್ಯಂತ ಅನುಕೂಲಕರ ವಾತಾವರಣ ಒದಗಿಸಿದೆ.




Click it and Unblock the Notifications
