Karnataka weather: ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಎಲ್ಲಿಯವರೆಗೂ ಗೊತ್ತಾ?
ಕರ್ನಾಟಕ, ನವೆಂಬರ್, 05: ಕಳೆದ ಎರಡು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದ್ದು, ಇನ್ನು ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಇನ್ನು ಇಂದಿನಿಂದ ನವೆಂಬರ್ 7ರವರೆಗೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೀಗ ಮುಂಗಾರು ಕೈಕೊಟ್ಟಿದ್ದು, ಹಿಂಗಾರು ಕೈಹಿಡಿಯುವ ಲಕ್ಷಣಗಳು ಎದ್ದು ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಕೊಡಗು, ಕರಾವಳಿ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಬಿಸಿಲಿನ ವಾತಾವರಣ ಇದ್ದು, ಸಂಜೆ ವೇಳೆಗೆ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದಿನಿಂದ ನವೆಂಬರ್ 7ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು,ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ (ನವೆಂಬರ್ 05) ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಅದರಲ್ಲೂ ಮಂಜಿನ ನಗರಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಹಳೆ ಮೈಸೂರು ಭಾಗಗಳಾದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆ, ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ನವೆಂಬರ್ 8ರವರೆಗೆ ಮಳೆ ಮುನ್ಸೂಚನೆ
ನವೆಂಬರ್ 8ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 7ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದ್ದು, ಇನ್ನುಳಿದ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ನವೆಂಬರ್ 8ರಂದು ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣಾ ಮಳೆ ಬೀಳುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಇನ್ನು ಬೆಂಗಳೂರು ಸುತ್ತಮುತ್ತಲೂ ಮುಂದಿನ ಎರಡು ದಿನ ಮಳೆಯ ವಾತಾವರಣ ಇರಲಿದೆ.
ಶನಿವಾರ (ನವೆಂಬರ್ 04) ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಉತ್ತಮ ಮಳೆ ಬಿದ್ದಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿತ್ತು.
ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 4 ಸೆ.ಮೀ, ಹಾರಂಗಿ ಹಾಗೂ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲಿ ತಲಾ 3 ಸೆ.ಮೀಟರ್ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕೊಡಗು ಜಿಲ್ಲೆಯ ಮಡಿಕೇರಿ ನಗರ, ಮೈಸೂರು ಜಿಲ್ಲೆಯ ಸರಗೂರು ಪಟ್ಟಣದಲ್ಲಿ ತಲಾ 2 ಸೆಂಟಿ ಮೀಟರ್, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಕೊಡಗಿನ ಮೂರ್ನಾಡು, ನಾಪೊಕ್ಲು, ವೀರಾಜಪೇಟೆಗಳಲ್ಲಿ ತಲಾ 1 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications