ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕಾ..! ಬಿಜೆಪಿಗರು ಹೇಳುತ್ತಿರುವುದೇನು?
ಬೆಂಗಳೂರು, ಆಗಸ್ಟ್ 19: ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಒಳಪಡಬೇಕು ಎಂದು ಆಗ್ರಹಿಸಿ, ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕರ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ವಿಧಾನಸೌಧ ಮುಂಭಾಗ ಗಾಂಧಿ ಪ್ರತಿಮೆ ಬಳಿಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಆರ್.ಅಶೋಕ್ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾಂಗ್ರೆಸ್ ಸರ್ಕಾರ ಕಾನೂನು ಹಾಳುಗೆಡವಿದೆ. ಆದ್ದರಿಂದ ರಾಷ್ಟ್ರಪತಿ ಆಡಳಿತ ತರಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ. ಸರ್ಕಾರದ ವಿರುದ್ಧ ನಾವು ಬಿಜೆಪಿ-ಜೆಡಿಎಸ್ ಮಾತ್ರವಲ್ಲ, ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಹ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ಅವರು ಗಮನಕ್ಕೆ ತಂದರು.

ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಆದರೆ ಅವರು ಕಲ್ಲು ಹೊಡೆಯಿರಿ, ಟಯರ್ ಸುಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದೆ.
ರಾಜ್ಯದಲ್ಲಿ ಪೊಲೀಸರ ಕೈ ಕಟ್ಟಿಹಾಕಲಾಗಿದೆ
ಈ ಸರ್ಕಾರವೇ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ನಾಯಕರು, ತಮ್ಮವರು ಪ್ರತಿಭಟನೆ ಮಾಡುತ್ತಾರೆ, ನೀವು ಸಹಕಾರ ನೀಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರ ಕೈ ಕಟ್ಟಿ ಹಾಕಿ ಕಾನೂನು ಸುವ್ಯವಸ್ಥೆ ಹಾಳುಗೆಡವಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಪುನರುಚ್ಚರಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ವತಃ ಲೂಟಿಕೋರರಾಗಿದ್ದಾರೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಅಧಿಕಾರದಿಂದ ಕೆಳಕ್ಕಿಳಿಯಬೇಕೆಂದು ಜನರು ಹೇಳುತ್ತಿದ್ದಾರೆ.
ಸರ್ಕಾರದ ಮುಂದೆ ಬಿಜೆಪಿ ಪ್ರಶ್ನೆ
ಇನ್ನೂ ಮುಖ್ಯಮಂತ್ರಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸದಿದ್ದರೂ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕಳ್ಳತನ ಮಾಡಿದ್ದಾರೆ, ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಮುಖ್ಯಮಂತ್ರಿಯವರು ಶಾಸಕಾಂಗ ಪಕ್ಷದ ಬೆಂಬಲವನ್ನು ತೋರಿಸುತ್ತಿದ್ದಾರೆ. ಇದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.
ವಿಧಾನಸಭೆ ಅಧಿವೇಶನ ಸಮಯದಲ್ಲಿ ಮುಡಾ ಹಗರಣ ಕುರಿತು ಬಿಜೆಪಿ ಚರ್ಚಿಸಲು ಮುಂದಾದಾಗ ಸಿಎಂ ಸಿದ್ದರಾಮಯ್ಯ ಪಲಾಯನ ಮಾಡಿದ್ದಾರೆ. ಅಲ್ಲಿ 224 ಶಾಸಕರು, ಮಾಧ್ಯಮಗಳು, ಅಧಿಕಾರಿಗಳಿದ್ದರೂ, ಉತ್ತರ ನೀಡಲಿಲ್ಲ. ವಿರೋಧ ಪಕ್ಷವಾಗಿ ಕರ್ತವ್ಯದಂತೆ ಬಿಜೆಪಿ ಪಾದಯಾತ್ರೆ ಮಾಡಿದೆ. ಆದರೆ ಸರ್ಕಾರದ ಅಧಿಕಾರ ಬಳಸಿಕೊಂಡು ಕಾಂಗ್ರೆಸ್ ಸಮಾವೇಶ ಮಾಡಿದೆ. ಇದನ್ನು ಸರ್ಕಾರ ಎನ್ನುತ್ತಾರೆಯೇ? ಎಂದು ಕೇಳಿದರು.

ತನಿಖೆಗೆ ಟಿ.ಜೆ.ಅಬ್ರಹಾಂ ಕೋರಿದ್ದು, ಬಿಜೆಪಿ ಕಾರ್ಯಕರ್ತರಲ್ಲ
ಕಾಂಗ್ರೆಸ್ ಸರ್ಕಾರದ ಹಗರಣದ ಕುರಿತು ಬಿಜೆಪಿ, ಜೆಡಿಎಸ್ ಮಾತ್ರ ಪ್ರತಿಭಟಿಸುತ್ತಿಲ್ಲ. ಮಾಧ್ಯಮಗಳು ನಮಗಿಂತ ಮೊದಲೇ ಹಗರಣದ ತನಿಖೆಯ ಸುದ್ದಿಗಳನ್ನು ಪ್ರಕಟ ಮಾಡಿವೆ. ಜನರಿಗೂ ಈಗ ಸರ್ಕಾರದ ಮೇಲೆ ಅನುಮಾನ ಬಂದಿದೆ. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಟಿ.ಜೆ.ಅಬ್ರಹಾಂ ಕೋರಿದ್ದಾರೆಯೇ ಹೊರತು ಬಿಜೆಪಿ ಕಾರ್ಯಕರ್ತರು ಕೋರಿಕೆ ಸಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರಾಜ್ಯಪಾಲರು ತನಿಖೆಗೆ ಅವಕಾಶ ನೀಡಿದ್ದಾರೆಯೇ ಹೊರತು ಸರ್ಕಾರ ವಜಾ ಮಾಡಿಲ್ಲ ಎಂದು ತಿಳಿಸಿದರು.
ಲೂಟಿಕೋರ ಸಿದ್ದರಾಮಯ್ಯನಿಗೆ ಶಿಕ್ಷೆಯಾಗಲಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್.ಕೆ.ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆಯಲಾಗಿತ್ತು. ಸಚಿವ ಬಿ.ನಾಗೇಂದ್ರ ಅವರ ತಪ್ಪು ಇಲ್ಲವಾದರೆ ರಾಜೀನಾಮೆ ಕೊಟ್ಟಿದ್ದು ಏಕೆ? ದಲಿತರಾದರೆ ರಾಜೀನಾಮೆ ಕೊಡಬೇಕು. ಆದರೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ಕೊಡಬಾರದು ಎಂದರೆ ಹೇಗೆ? 5 ಲಕ್ಷ ರೂ.ಗೆ ಜಮೀನು ಪಡೆದು 62 ಕೋಟಿ ರೂ. ಕೇಳುವ ಯೋಜನೆ ರಾಜ್ಯದಲ್ಲಿದ್ದರೆ ಎಲ್ಲರಿಗೂ ತಿಳಿಸಲಿ. ಇಂತಹ ಲೂಟಿಕೋರರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿದರು.
ರಾಜ್ಯಪಾಲರ ಚಿತ್ರ ಸುಡುವುದು ಅಪಚಾರ
ರಾಜ್ಯಪಾಲರ ಚಿತ್ರ ಸುಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಕಳೆದ ವರ್ಷ ಮಾಡಿದ ಪ್ರತಿಭಟನೆಗೆ ಈಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು ಎಷ್ಟು ದಿನ ಅಧಿಕಾರದಲ್ಲಿರುತ್ತಾರೆ? ಅನ್ಯಾಯದ ವಿರುದ್ಧ, ಜನರ ಪರವಾಗಿ ಹೋರಾಡುವ ಹಕ್ಕು ವಿರೋಧ ಪಕ್ಷದಲ್ಲಿರುವ ಎಲ್ಲ ಶಾಸಕರಿಗೂ ಇದೆ. ಬಿಜೆಪಿ ಕೂಡ ಕಾನೂನು ಪ್ರಕಾರ ಮುಂದೆ ಹೆಜ್ಜೆ ಇಡಲಿದೆ ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications