ಕರ್ನಾಟಕದ 66 ಆರ್‌ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು?
ಬೆಂಗಳೂರು: ರಾಜ್ಯದಲ್ಲಿ ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಣಿಜ್ಯ (ಸಾರಿಗೆ) ವಾಹನಗಳ ಅರ್ಹತಾ (ಫಿಟ್ನೆಸ್) ಪ್ರಮಾಣಪತ್ರ ವಿತರಣೆಯಲ್ಲಿ ನಡೆಯುತ್ತಿದ್ದ ದೋಷಪೂರಿತ ಕ್ರಮಗಳನ್ನು ತಡೆಯಲು ಸರ್ಕಾರ ಮುಂದಾಗಿದೆ. ಸಾರಿಗೆ ಇಲಾಖೆಯು 'ಜಿಯೋ-ಫೆನ್ಸಿಂಗ್' (ಸ್ಥಳ) ಆಧಾರಿತ 'ಎಂವಾಹನ್' (Geo-fencing mVahan) ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನಕ್ಕೆ ತಂದಿದೆ. ವಾಹನ ಸವಾರರು ಇನ್ನುಮುಂದೆ ಫಿಟ್ನೆಸ್ ಪ್ರಮಾಣಪತ್ರವನ್ನು ಯಾವ ತೊಂದರೆ ಇಲ್ಲದೇ ಪಡೆಯಲು ಈ ಆಪ್ ಸಹಕಾಯಾರಿಯಾಗುತ್ತದೆ.
ಕರ್ನಾಟಕ ರಾಜ್ಯದ 66 ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿ ಒ) ಕಚೇರಿಗಳಲ್ಲಿ ಈ Geo-fencing ಆಧಾರಿತ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನಗೊಳಿಸಿರುವ ಕುರಿತು-ಪಾರದರ್ಶಕತೆ ಮತ್ತು ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆಯ ರಾಜ್ಯದ ಎಲ್ಲ ಆರ್ ಟಿ ಒ ಕಛೇರಿಗಳಲ್ಲಿ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಸಾರಿಗೆ ವಾಹನಗಳಿಗೆ ಅರ್ಹತಾ (ಫಿಟೈಸ್) ಪ್ರಮಾಣಪತ್ರ ನೀಡುವಿಕೆಯಲ್ಲಿ ನಡೆಯುತ್ತಿದ್ದ ದುರುದ್ದೇಶಪೂರ್ವಕ ತಪ್ಪುಗಳನ್ನು ಸರಿಪಡಿಸಲಾಗುತ್ತದೆ. ಬಹುಕಾಲದಿಂದ ಟೀಕೆಗೆ ಗುರಿಯಾಗಿದ್ದ ವಾಹನಗಳ ಅರ್ಹತಾ (ಫಿಟೈಸ್) ಪ್ರಮಾಣಪತ್ರ ವಿತರಣೆಯಲ್ಲಿನ ದೋಷ, ಅಕ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಾಣಿಜ್ಯ (ಸಾರಿಗೆ) ವಾಹನಗಳು ನೋಂದಣಿಯಾಗಿ ಚಾಲ್ತಿಯಲ್ಲಿವೆ. ವಾಹನಗಳ ಅರ್ಹತಾ (ಫಿಟೈಸ್) ಪ್ರಮಾಣಪತ್ರ ನೀಡುವಿಕೆಯಲ್ಲಿ ಏಕರೂಪತೆ ಇಲ್ಲ, ಪಾರದರ್ಶಕ ವ್ಯವಸ್ಥೆಯಿಲ್ಲ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿದ್ದವು.
ಅಪ್ಲಿಕೇಷನ್ ಅಡಿ ಪ್ರಮಾಣಪತ್ರ ವಿತರಣೆ ಹೇಗೆ?
ಸದರಿ ಅಪ್ಲಿಕೇಷನ್ ಮೂಲಕ ಪ್ರತಿಯೊಂದು ಆರ್ ಟಿ ಒ ಕಚೇರಿಗಳಿಗೆ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸಲಾಗುವ ಪ್ರದೇಶಗಳನ್ನು ನಿಗದಿಪಡಿಸಿ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ನಿಗದಿತ ಪ್ರದೇಶಗಳಿಗೆ ವಾಹನಗಳು ಭೌತಿಕವಾಗಿ ಹಾಜರಾದ ನಂತರವೇ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾನುಸಾರ ಪರಿಶೀಲನೆ ಆಗುತ್ತದೆ. ಪರಿಶೀಲನೆಯ ವೇಳೆ ವಾಹನದ ವಿವಿಧ ಆರು (6) ಛಾಯಾಚಿತ್ರಗಳನ್ನು ಕಡ್ಡಾಯವಾಗಿ ತೆಗೆದು ಅಪ್ಲಿಕೇಷನ್‌ಲ್ಲಿ ಅನುಮೋದನೆಗೊಂಡ ನಂತರವೇ ವಾಹನದ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ನಿಗದಿಪಡಿಸಿರುವ ನಿಗದಿತ ಪ್ರದೇಶಗಳನ್ನು ಹೊರತುಪಡಿಸಿ ಇನ್ನಿತರ ಪ್ರದೇಶಗಳಲ್ಲಿ ವಾಹನದ ಅರ್ಹತಾ ಪ್ರಮಾಣಪತ್ರ ನೀಡಲು ಆಗುವುದಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನದ ಅರ್ಹತಾ ಪ್ರಮಾಣಪತ್ರ ಕೋರಿ ಬರುವ ವಾಹನಗಳ ಪೈಕಿ ಕನಿಷ್ಠ ಶೇಕಡಾ 20ರಷ್ಟು ವಾಹನಗಳನ್ನು ಮರು ತಪಾಸಣೆ ಮಾಡಲು ಸೂಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳ ಬಳಿಕ ಕರ್ನಾಟಕದ ಆರ್‌ಟಿಓ ಕಚೇರಿಗಳಲ್ಲಿ ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಅಳವಡಿಸಲಾಗಿದೆ. ಇದರಿಂದ ವಾಹನಗಳ ಅರ್ಹತಾ ಪ್ರಮಾಣಪತ್ರ ವಿತರಣೆ ಪಾರದರ್ಶಕವಾಗಿ ನಡೆಯಲಿದೆ. ಸಾರ್ವಜನಿಕ ವಿಶ್ವಾಸಾರ್ಹತೆ ಹೆಚ್ಚಳಿದೆ. ದೀರ್ಘ ಕಾಲದಿಂದ ಅರ್ಹತಾ ಪ್ರಮಾಣಪತ್ರ ವಿತರಣೆಯಲ್ಲಿನ ಅಪಸ್ವರಕ್ಕೆ ತೆರೆ ಬಿದ್ದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications