Karnataka Rain Alert: ಈ ಜಿಲ್ಲೆಗಳಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆ
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದು ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳವಾರ ಸಂಜೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮನ ಇಲಾಖೆ ವರದಿಯಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಮೂರು ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಜೊತೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದ್ದು, ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಭಾರಿ ಮಳೆ ಸೂಚನೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ನೀಡಿವ ಅಧಿಕಾರವನ್ನು ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರ್ ಅವರಿಗೆ ನೀಡಿದ್ದಾರೆ.
ಮಲೆನಾಡು ಮತ್ತು ಇತರೆ ಜಿಲ್ಲೆಗಳಲ್ಲೂ ಉತ್ತಮ ಮಳೆ
ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನೂ ನಾಲ್ಕು ದಿನ ವ್ಯಾಪಕ ಮಳೆ
ರಾಜ್ಯದ ಹಲವು ಭಾಗಳಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದು ಇನ್ನೂ ನಾಲ್ಕು ದಿನ ರಾಜ್ಯದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ. ಜುಲೈ 8ರವರೆಗೆ ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಕೂಡ ಬಾರಿ ಮಳೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಜುಲೈ 4ರಂದು ಬೆಳಗ್ಗೆ 8.30ಕ್ಕೆ ಕೊನೆಯಾದಂತೆ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಎನ್ನುವಲ್ಲಿ 173.5 ಮಿಮೀ ಮಳೆಯಾಗಿದೆ. ಬೆಂಗಳೂರು ವಲಯದಲ್ಲಿ ಹಂಪಿ ನಗರದಲ್ಲಿ 31.5 ಮಿಮೀ ಮಳೆಯಾಗಿದೆ.
ಮಂಗಳವಾರ ಸಂಜೆ ವೇಳೆಗೆ ಬೆಂಗಳೂರಿನ ಹಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ರಾತ್ರಿ ವೇಳೆಗೆ ಮಳೆ ತೀವ್ರವಾಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇದ್ದು, ತಾಪಮಾನ ಭಾರಿ ಕಡಿಮೆಯಾಗಿದೆ.












Click it and Unblock the Notifications