Karnataka Rain: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಉಳಿದ ಜಿಲ್ಲೆಗಳ ಮಳೆ ವರದಿ
ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಜೂನ್ ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಭಾನುವಾರದಿಂದ ಚುರುಕಾಗುವ ಲಕ್ಷಣ ತೋರಿಸಿದೆ. ಸೋಮವಾರ, ಮಂಗಳವಾರ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಬುಧವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ, ಮಿಂಚು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದುಮ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ವ್ಯಾಪಕ ಮಳೆಯ ಮುನ್ಸೂಚನೆ ನೀಡಲಾಗಿದೆ.

ಭಾರಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ತೀರಕ್ಕೆ ತೆರಳದಂತೆ ಪ್ರವಾಸಿಗರು, ಸ್ಥಳೀಯರಿಗೂ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋಮವಾರ ಕೂಡ ಕರಾವಳಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ
ಮಂಗಳವಾರ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗೆಯಿಂದೂ ಮೋಡ ಕವಿದ ವಾತಾವರಣ ಇತ್ತು, ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ.
ಹಾಸನ, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಹಾಸನ ಜಿಲ್ಲೆಯ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಬುಧವಾರ ಕೂಡ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗದಲ್ಲಿ ಮಂಗಳವಾರ ಭಾರಿ ಮಳೆಯಾದ ಕಾರಣ ರಸ್ತೆಗಳಲ್ಲಿ ನೀರು ತುಂಬಿ ಜನ ಪರದಾಡುವಂತಾಯಿತು. ಹಲವು ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದ್ದವು, ಬಹುತೇಕ ರಸ್ತೆಗಳು ಕಾಲುವೆಗಳಂತಾಗಿದ್ದವು. ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಮಳೆ ಮುನ್ಸೂಚನೆ
ಬೆಂಗಳೂರು ನಗರದಲ್ಲಿ ಬುಧವಾರ ಕೂಡ ಮೋಡ ಕವಿದ ವಾತಾವರಣ ಮುಂದುವರೆದಿದೆ. ಮಂಗಳವಾರ ಬೆಳಗ್ಗೆಯೇ ನಗರದಲ್ಲಿ ಉತ್ತಮ ವರ್ಷಧಾರೆಯಾಗಿತ್ತು, ಹಲವು ರಸ್ತೆಗಳು ಜಲಾವೃತವಾದ ಕಾರಣ ವಾಹನ ಸವಾರರು ಪರದಾಡಿದರು, ಹಲವು ಅಂಡರ್ ಪಾಸ್‌ಗಳನ್ನು ಬಂದ್ ಮಾಡಿದ್ದರಿಂದ ಟ್ರಾಫಿಕ್ ಸಮಸ್ಯೆ ಕೂಡ ಉಂಟಾಗಿತ್ತು. ಬುಧವಾರ ಕೂಡ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications