Karnataka Rain: ಮುಂದಿನ ಒಂದು ವಾರ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ-ಎಲ್ಲೆಲ್ಲಿ?
Karnataka Rain: ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಲಿದೆ. ಇನ್ನು ಇಂದು (ಮೇ 18) ಮಟ.. ಮಟ ಮಧ್ಯಾಹ್ನವೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಮೇ 24ರವರೆಗೂ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ವೇಳೆಗೆ ನಗರದ ಹಲವೆಡೆ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಹಾಗೆಯೇ ಸಂಜೆ ವೇಳೆಗೆ ಸಂಪೂರ್ಣ ನಗರದೆಲ್ಲೆಡೆ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗೆಯೇ ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ಹಲವೆಡೆಯೂ ಗುಡುಗು ಸಹಿತ ಮಳೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ಮೇ 24ರವರೆಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನದ, ಕೊಪ್ಪಳ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.
ಇನ್ನು ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಸ್ವಲ್ಪ ಮಟ್ಟಿಗೆ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ, ಇನ್ನು ಮುಂದಿನ ಒಂದು ವಾರ ಬಹತೇಕ ಜಿಲ್ಲೆಗಳಲ್ಲಿ ತಾಪಮಾನ ಪ್ರಮಾಣ ತಗ್ಗಲಿದ್ದು, ಮಳೆರಾಯ ಅಬ್ಬರಿಸಲಿದ್ದಾನೆ ಎನ್ನುವ ಮುನ್ಸೂಚನೆ ನೀಡಿದೆ.
2023ರಿಂದ 2024ರ ಏಪ್ರಿಲ್ 20ರವರೆಗೂ ಯಾವುದೇ ಮಳೆ ಇಲ್ಲದೆ, ರಾಜ್ಯದ ಬಹುತೇಕ ಭಾಗಗಳಲ್ಲಿ ಬರದೆ, ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ಜಲಮೂಲಗಳೆಲ್ಲ ಬತ್ತಿ ಹೋಗಿದ್ದು, ಇದರಿಂದ ಬೆಳೆಗಳೆಲ್ಲ ಸೂರ್ಯನ ಶಾಖಕ್ಕೆ ಹೋಗಿ ರೈತರು ಕಂಗಾಲಾಗಿದ್ದರು. ಇದೀಗ 2024ರ ಮೇ ಮೊದಲ ವಾರದಿಂದ ಇಲ್ಲಿಯವರೆಗೆ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಮತ್ತೊಂದೆಡೆ ರಾಜ್ಯದ ಹಲವೆಡೆ ಜಲಾಮೂಲಗಳಿಗೂ ನೀರು ಬರುತ್ತಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.












Click it and Unblock the Notifications