Karnataka Weather: ಬೆಂಗಳೂರು ಸೇರಿ ರಾಜ್ಯದಲ್ಲಿ ಚಳಿ ಹೆಚ್ಚಳ! ಈ ಜಿಲ್ಲೆಗಳಿಗೆ ಶೀತ ಅಲೆ ಎಚ್ಚರಿಕೆ..! Cold Wave
Karnataka Weather Forecast: ಕರ್ನಾಟಕದಲ್ಲಿ ತಾಪಮಾನ ಇಳಿಕೆ ಆಗಿದ್ದು, ಚಳಿ ಪ್ರಮಾಣ ಹೆಚ್ಚಾಗುತ್ತಿದೆ. ನೆನ್ನೆ ಬೀದರ್ ಜಿಲ್ಲೆಗೆ ಶೀತದ ಅಲೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಿಗೆ ಶೀತದ ಅಲೆ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಇತರ ಜಿಲ್ಲೆಗಳಲ್ಲೂ ಬೆಳಗ್ಗೆ, ರಾತ್ರಿ ದಟ್ಟ ಮಂಜು ಆವರಿಸಲಿದೆ. ತಂಪು ವಾತಾವರಣ ಹೆಚ್ಚಾಗಲಿದೆ. ರಾಜ್ಯಾದ್ಯಂತ ಒಣಹವೆ, ಹಗಲು ಉರಿ ಬಿಸಿಲು ದಾಖಲಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಕರ್ನಾಟಕ ಕೇಂದ್ರವು ಮುನ್ಸೂಚನೆ ನೀಡಿದೆ.
ಮುಂದಿನ 03 ದಿನ ವಾತಾವರಣದಲ್ಲಿ ಶೀತದ ಅಲೆಗಳ ಪ್ರಭಾವ ಹೆಚ್ಚಿರಲಿದೆ. ಇಡಿ ರಾಜ್ಯದಲ್ಲಿ ತಂಪು ವಾತಾವರಣವು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಾಗಿರಲಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಪ್ರತ್ಯೇಕ ಪ್ರದೇಶಗಳಲ್ಲಿ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ಬೆಳಗ್ಗೆ ಮಂಜಿನ ವಾತಾವರಣ ಸಹಿತ ಚಳಿ ಹೆಚ್ಚಿರಲಿದೆ. ಉಳಿದಂತೆ ಮಧ್ಯಾಹ್ನದಿಂದ ಸಂಜೆವರೆಗೆ ಒಣಹವೆಯು ನಿರ್ಮಾಣವಾಗಲಿದೆ.

ಕರಾವಳಿ ಭಾಗದ ಮೂರು ಜಿಲ್ಲೆಗಳು, ಮಲನಾಡಿನ ಭಾಗ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಜೊತೆಗೆ ಹೆಚ್ಚಿನ ಚಳಿ ಆವರಿಸಲಿದೆ. ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಆಗಲಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಮೇಲ್ಮೈನಲ್ಲಿನ ಕಡಿಮೆ ಒತ್ತಡದ ಪ್ರದೇಶವು ದುರ್ಬಲಗೊಂಡ ಹಿನ್ನೆಲೆಯಲ್ಲಿ ಸ್ಪಷ್ಟ ನೀಲಿ ಆಕಾಶ ಇರಲಿದೆ. ಈ ವೇಳೆ ಮಧ್ಯಾಹ್ನ ಗರಿಷ್ಠ ತಾಪಮಾನ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿರುವ ಶೀತದ ಅಲೆಗಳು ಬೆಂಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಲೂ ಬಹುದು.
ರಾಜ್ಯದ ಗರಿಷ್ಠ ತಾಪಮಾನದ ಜಿಲ್ಲೆಗಳು..
ಮೊದಲು ಎರಡು ಮೂರು ಜಿಲ್ಲೆಗಳಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿತ್ತು. ಇದೀಗ ಗರಿಷ್ಠ ತಾಪಮಾನದ ಜಿಲ್ಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾರವಾರದಲ್ಲಿ 35 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 34 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ ಮತ್ತು ಮಂಗಳೂರಿನಲ್ಲಿ ತಲಾ 33 ಡಿಗ್ರಿ ಸೆಲ್ಸಿಯಸ್, ಹಾಸನ 33 ಡಿಗ್ರಿ ಸೆಲ್ಸಿಯಸ್, ಮಂಗಳೂರು ಏರ್‌ಪೋರ್ಟ್ 32 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32 ಡಿಗ್ರಿ ಸೆಲ್ಸಿಯಸ್, ವಿಜಯಪುರ 30 ಡಿಗ್ರಿ ಸೆಲ್ಸಿಯಸ್, ಮೈಸೂರು ಮತ್ತು ಗದಗ ತಲಾ 29 ಡಿಗ್ರಿ ಸೆಲ್ಸಿಯಸ್ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ರಾಜಧಾನಿಯಲ್ಲಿ ಚಳಿ ಏರಿಕೆ..
ಬೆಂಗಳೂರಿನಲ್ಲಿ ಮಬ್ಬು ಕವಿದ ವಾತಾವರಣ ಮರೆಯಾಗಿದೆ. ಸ್ಪಷ್ಟ ಆಕಾಶ ಕಂಡು ಬಂದಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು, ಚಳಿ ಏರಿಕೆಯ ಸಾಧ್ಯತೆ ಇದೆ. ಇಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಮಳೆ ಬರುತ್ತಾ..?
ವರದಿಗಳ ಪ್ರಕಾರ ಬಂಗಾಳಕೊಲ್ಲಿಯಲ್ಲಿ ವೈಪರೀತ್ಯ ಉಂಟಾಗಿದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ, ಮಂಗಳೂರು, ದಕ್ಷಿಣ ಕನ್ನಡ ಭಾಗಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಮಬ್ಬು ವಾತಾವರಣ ನಿರ್ಮಾಣವಾಗಿದೆ ಎಂದು ವರದಿ ಆಗಿದೆ. ಆದರೆ ಮಳೆ ಬರುವಿಕೆ ಬಗ್ಗೆ ಐಎಂಡಿ ಎಲ್ಲಿಯೂ ಖಚಿತಪಡಿಸಿಲ್ಲ.












Click it and Unblock the Notifications