ಸಿಡಿಯಿಂದ ಸ್ಟಿಂಗ್‌ವರೆಗೆ; ಕರ್ನಾಟಕ ರಾಜಕೀಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ ‘ಆಪರೇಷನ್‌’ ಕಥೆ

ಕರ್ನಾಟಕ ರಾಜಕೀಯದಲ್ಲಿ 'ಸ್ಟಿಂಗ್‌ ಆಪರೇಷನ್‌' ಎಂಬ ಪದ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಿಗೆ ಸ್ಟಿಂಗ್‌ ಆಪರೇಷನ್‌ ಬಗ್ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ 'ಸ್ಟಿಂಗ್‌ ಆಪರೇಷನ್‌ ಪಿತಾಮಹ ಯಾರು?', 'ಈ ರಾಜಕೀಯ ಆರೋಪದ ಸರಪಳಿ ಶುರುವಾಗಿದ್ದು ಎಲ್ಲಿಂದ?' ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ.

Karnataka Politics Who Is the Father of Sting Operations Why Issue Is Making Waves in Politics Again

'ಸ್ಟಿಂಗ್‌' ಚರ್ಚೆ ಶುರುವಾಗಿದ್ದು ಹೇಗೆ?

ಅಕ್ಟೋಬರ್‌ 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೆಲವು ಸಚಿವರು ಸ್ಟಿಂಗ್‌ ಆಪರೇಷನ್‌ ಅಥವಾ ಟ್ರ್ಯಾಪ್‌ಗೆ ಒಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು ಎಂಬ ವರದಿಗಳು ಹೊರಬಂದವು. ಖಾಸಗಿ ಏಜೆನ್ಸಿಗಳು ಸಚಿವರನ್ನು ಗುರಿಯಾಗಿಸಿಕೊಂಡು ಇಂತಹ ಕಾರ್ಯಾಚರಣೆ ನಡೆಸಬಹುದು ಎಂಬ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.

'ಸ್ಟಿಂಗ್‌ ಆಪರೇಷನ್‌ ಪಿತಾಮಹ ಡಿಕೆಶಿ': ಕುಮಾರಸ್ವಾಮಿ

ಕುಮಾರಸ್ವಾಮಿ ಅವರ ಪ್ರಕಾರ, ಕಾಂಗ್ರೆಸ್‌ನಲ್ಲಿರುವ ಕೆಲವರು ತಮ್ಮೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ಡಿಕೆ ಶಿವಕುಮಾರ್‌ ಅವರೇ ಸ್ಟಿಂಗ್‌ ಆಪರೇಷನ್‌ ನಡೆಸಿಸಿ, ಅದರ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಪಾತ್ರವಹಿಸಿದ್ದಾರೆ ಎಂಬುದು ಅವರ ಪ್ರಮುಖ ಆರೋಪ. ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿ ಬೇರೆ ವಿಚಾರದ ಹೆಸರಿನಲ್ಲಿ ಸ್ಟಿಂಗ್‌ ಸಂಬಂಧಿತ ವಿಷಯ ಮುಂದಿಟ್ಟು ರಾಜೀನಾಮೆಗೆ ಒತ್ತಡ ಹೇರಲಾಯಿತು ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.

ಆದರೆಈ ಆರೋಪಕ್ಕೆ ಸಾರ್ವಜನಿಕವಾಗಿ ದೃಢಪಡಿಸಿದ ಸಾಕ್ಷ್ಯವನ್ನು ಕುಮಾರಸ್ವಾಮಿ ಅವರು ಈವರೆಗೆ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್‌ ಕೂಡ ಇದನ್ನು ರಾಜಕೀಯ ಪ್ರೇರಿತ ಮತ್ತು ಆಧಾರರಹಿತ ಆರೋಪ ಎಂದು ತಳ್ಳಿಹಾಕಿದೆ. ಕುಮಾರಸ್ವಾಮಿ ಮತ್ತೊಂದು ಹಂತಕ್ಕೆ ಹೋಗಿ ರಮೇಶ್‌ ಜಾರಕಿಹೊಳಿ, ಕೆ.ಎನ್‌. ರಾಜಣ್ಣ ಸೇರಿದಂತೆ ಹಿಂದಿನ ಸ್ಟಿಂಗ್‌/ಹನಿಟ್ರ್ಯಾಪ್‌ ವಿವಾದಗಳನ್ನೂ ಪ್ರಸ್ತಾಪಿಸಿದ್ದಾರೆ.

‌ ಹಾಗಾದರೆ ರಮೇಶ್‌ ಜಾರಕಿಹೊಳಿ ಪ್ರಕರಣ ಏನು?

'ಸ್ಟಿಂಗ್‌ ಆಪರೇಷನ್‌' ಎಂಬ ಪದ ಕರ್ನಾಟಕ ರಾಜಕೀಯದಲ್ಲಿ ವ್ಯಾಪಕವಾಗಿ ಚರ್ಚೆಯಾಗಲು ಪ್ರಮುಖ ಕಾರಣಗಳಲ್ಲಿ ಒಂದು 2021ರ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ. 2021ರ ಮಾರ್ಚ್‌ನಲ್ಲಿ ಜಾರಕಿಹೊಳಿ ಅವರಿಗೆ ಸಂಬಂಧಿಸಿದೆ ಎನ್ನಲಾದ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾದವು. ಬಳಿಕ ಜಾರಕಿಹೊಳಿ ಇದನ್ನು ತಮ್ಮ ವಿರುದ್ಧದ ರಾಜಕೀಯ ಸಂಚು ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿತ್ತು. ತನಿಖೆಯಲ್ಲಿ ಸ್ಟಿಂಗ್‌ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಹೆಸರೂ ಪ್ರಸ್ತಾಪವಾಗಿದ್ದವು.

ಇದೇ ಪ್ರಕರಣವನ್ನು ಈಗ ಕುಮಾರಸ್ವಾಮಿ ಮತ್ತು ವಿಜಯೇಂದ್ರ ಅವರು ಡಿ.ಕೆ. ಶಿವಕುಮಾರ್‌ ವಿರುದ್ಧದ ತಮ್ಮ ರಾಜಕೀಯ ವಾಗ್ದಾಳಿಯಲ್ಲಿ ಮತ್ತೆ ಉಲ್ಲೇಖಿಸುತ್ತಿದ್ದಾರೆ. ಆದರೆ ಜಾರಕಿಹೊಳಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್‌ ಅವರೇ ಸ್ಟಿಂಗ್‌ ಮಾಡಿಸಿದ್ದಾರೆ ಎಂಬ ಬಗ್ಗೆ ರಾಜಕೀಯ ನಾಯಕರು ಪರೋಕ್ಷವಾಗಿ ಆರೋಪಗಳನ್ನ ನಡೆಸಿದ್ದಾರೆ .

Karnataka Politics: ಕೆ.ಎನ್‌. ರಾಜಣ್ಣ ಹೇಳಿಕೆ ಯಾಕೆ ಮುಖ್ಯ?

2025ರಲ್ಲಿ ಕಾಂಗ್ರೆಸ್‌ ಸರ್ಕಾರದ ಸಚಿವರಾಗಿದ್ದ ಕೆ.ಎನ್‌. ರಾಜಣ್ಣ ಅವರು ವಿಧಾನಸಭೆಯಲ್ಲಿ ಸುಮಾರು 48 ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡಲು ಪ್ರಯತ್ನಿಸಲಾಗಿದೆ ಅಥವಾ ಅವರ ವಿಡಿಯೋಗಳನ್ನು ದಾಖಲಿಸಲಾಗಿದೆ ಎಂಬ ಗಂಭೀರ ಹೇಳಿಕೆ ನೀಡಿದ್ದರು. ತಮ್ಮ ಮೇಲೂ ಇಂತಹ ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದ್ದರು. ಈ ಹೇಳಿಕೆ ಬಳಿಕ ಸರ್ಕಾರ ತನಿಖೆ ನಡೆಸುವ ಭರವಸೆ ನೀಡಿತ್ತು.

ಹೀಗಾಗಿ ಸ್ಟಿಂಗ್‌ ಅಥವಾ ಹನಿಟ್ರ್ಯಾಪ್‌ ಆರೋಪ ಕರ್ನಾಟಕ ರಾಜಕೀಯದಲ್ಲಿ ಹೊಸದಲ್ಲ. ಆದರೆ ಈಗಿನ ವಿಶೇಷತೆ ಏನೆಂದರೆ, ಮುಖ್ಯಮಂತ್ರಿಯೇ ತಮ್ಮ ಸಚಿವರಿಗೆ ಎಚ್ಚರಿಕೆ ನೀಡಿದ ನಂತರ, ವಿರೋಧ ಪಕ್ಷದ ನಾಯಕರು ಅದನ್ನೇ ಡಿಕೆ ಶಿವಕುಮಾರ್ ವಿರುದ್ಧದ ಆರೋಪಕ್ಕೆ ಬಳಸುತ್ತಿದ್ದಾರೆ.‌

'ಸ್ಟಿಂಗ್‌ ಇತಿಹಾಸ ಕಾಂಗ್ರೆಸ್‌ ನಾಯಕರಿಗೇ ಗೊತ್ತು': ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯ ಪ್ರಕಾರ, ಸ್ಟಿಂಗ್‌ ಆಪರೇಷನ್‌ ನಡೆಸುವುದು ಮತ್ತು ಬ್ಲ್ಯಾಕ್‌ಮೇಲ್‌ ಮಾಡುವ ಇತಿಹಾಸ ಕಾಂಗ್ರೆಸ್‌ ನಾಯಕರಿಗೇ ಹೆಚ್ಚು ಗೊತ್ತು.ಸ್ಟಿಂಗ್‌ ನಡೆಸುತ್ತಿರುವ ಎರಡು ಏಜೆನ್ಸಿಗಳು ಯಾವುವು ಎಂಬುದನ್ನು ಡಿ.ಕೆ. ಶಿವಕುಮಾರ್‌ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಮೇಶ್‌ ಜಾರಕಿಹೊಳಿ ಪ್ರಕರಣವನ್ನು ಉಲ್ಲೇಖಿಸಿರುವ ವಿಜಯೇಂದ್ರ,ಆ ಪ್ರಕರಣದಲ್ಲಿ ಯಾರು ಸ್ಟಿಂಗ್‌ ಮಾಡಿಸಿದರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ. ಆದರೆ ತಾವು ಯಾರ ಹೆಸರನ್ನೂ ಹೇಳುವುದಿಲ್ಲ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ, ಸಚಿವರಿಗೆ "ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ, ಬಾಗಿಲು ಮುಚ್ಚಿಕೊಂಡು" ಇರಬೇಕೆಂದು ಹೇಳುವುದಕ್ಕಿಂತ ಭ್ರಷ್ಟಾಚಾರ ಮಾಡದಂತೆ ಸಲಹೆ ನೀಡಬೇಕಿತ್ತು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ನನ್ನ ವಿರುದ್ದವೂ ಸ್ಟಿಂಗ್‌ ಆಪರೇಷನ್‌ : ಡಿ ಕೆ ಶಿವಕುಮಾರ್

ಇದಾದ ಬಳಿಕ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಮಾತನಾಡಿ,‌ ತಮ್ಮ ವಿರುದ್ಧವೂ ಸ್ಟಿಂಗ್‌ ಆಪರೇಷನ್‌ ನಡೆಸಲು ಪ್ರಯತ್ನ ನಡೆದಿತ್ತು, ಅದರ ಹಿಂದೆ ಯಾರಿದ್ದಾರೆ, ಯಾರು ಹಣಕಾಸು ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿ ಮತ್ತು ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದರು. ಅಗತ್ಯವಿದ್ದರೆ ಫೋಟೋ ಸೇರಿದಂತೆ ಸಾಕ್ಷ್ಯ ನೀಡುವುದಾಗಿ ಅವರು ಹೇಳಿದ್ದಾರೆ.

ತಮ್ಮ ವಿರುದ್ಧವೂ ಸ್ಟಿಂಗ್‌ ನಡೆಸಲು ಪ್ರಯತ್ನ ನಡೆದಿದೆ ಮತ್ತು ಇದರ ಹಿಂದೆ ಇರುವ ವ್ಯಕ್ತಿ ಯಾರು ಎಂಬುದು ತಮಗೆ ಗೊತ್ತಿದೆ. ಹಣಕಾಸು ನೆರವು ನೀಡಿದವರು, ಕಾರ್ಯಾಚರಣೆ ರೂಪಿಸಿದವರು ಹಾಗೂ ಅದರ ಹಿಂದಿರುವ 'ಗಾಡ್‌ಫಾದರ್‌' ಬಗ್ಗೆ ಮಾಹಿತಿ ತಮ್ಮ ಬಳಿ ಇದೆ ಎಂದು ಅವರು ಹೇಳಿದ್ದಾರೆ. ಅಗತ್ಯವಿದ್ದರೆ ತನಿಖೆ ನಡೆಸುವುದಾಗಿಯೂ ಹೇಳಿದ್ದಾರೆ.

ಹೀಗಾಗಿ ಕರ್ನಾಟಕ ರಾಜಕೀಯದಲ್ಲಿ ಸ್ಟಿಂಗ್‌ ಆಪರೇಷನ್‌ ಈಗ ಕೇವಲ ಒಂದು ಆರೋಪದ ವಿಷಯವಾಗಿ ಉಳಿದಿಲ್ಲ. ಹಳೆಯ ಸಿಡಿ ಪ್ರಕರಣಗಳು, ಹನಿಟ್ರ್ಯಾಪ್‌ ಆರೋಪಗಳು, ಕಾಂಗ್ರೆಸ್‌ನ ಆಂತರಿಕ ರಾಜಕೀಯ ಮತ್ತು ಬಿಜೆಪಿ-ಜೆಡಿಎಸ್‌ ವಾಗ್ದಾಳಿಗಳನ್ನೆಲ್ಲ ಜೋಡಿಸುವ ಹೊಸ ರಾಜಕೀಯ ಕಥೆಯಾಗಿ ರೂಪುಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+