Karnataka Government: ಕರ್ನಾಟಕದ ಜನರ ಮೇಲೆ ಸರ್ಕಾರದಿಂದ ಹೊಸ ಶುಲ್ಕದ ಹೊರೆ?
ಬೆಂಗಳೂರು, ಅಕ್ಟೋಬರ್ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಮೇಲೆ ಹೊಸ ಶುಲ್ಕದ ಬರೆ ಹೊರಿಸಲು ಮುಂದಾಗಿದೆ. ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ವ್ಯವಹಾರದ ಮೇಲೆ ಶುಲ್ಕವನ್ನು ವಿಧಿಸಲಾಗುತ್ತದೆ. ಅಲ್ಲದೇ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಡಿಸೆಂಬರ್‌ನಲ್ಲಿ ಚಳಿಗಾಲದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಮಸೂದೆಯೊಂದನ್ನು ಮಂಡನೆ ಮಾಡಲಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಕಾರ್ಮಿಕ ಇಲಾಖೆ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತಗೊಂಡದ ಸಂದರ್ಭದಲ್ಲಿ ಪರಿಹಾರ ಪಡೆಯಲು 'ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ' ರೂಪಿಸಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಈ ಯೋಜನೆ ಜಾರಿಗೆ ತಂದಿದ್ದು, ಎಲ್ಲಾ ಅರ್ಹ ಗಿಗ್ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ.

ಸ್ವಿಗ್ಗಿ, ಝೊಮ್ಯಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‍ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‍ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಗೆ ಇದು ಸಹಾಯಕವಾಗಿದೆ.
1 ರಿಂದ 2 ರಷ್ಟು ಶುಲ್ಕ: ಈಗ ಕರ್ನಾಟಕ ಸರ್ಕಾರ ಇಂತಹ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ವ್ಯವಹಾರದ ಮೇಲೆ ಶೇ 1 ರಿಂದ 2ರಷ್ಟು ಶುಲ್ಕವನ್ನು ವಿಧಿಸಲು ತೀರ್ಮಾನಿಸಿದೆ. ಸ್ವಿಗ್ಗಿ, ಝೊಮ್ಯಾಟೋಗಳಂತಹ ಫುಡ್‍ಡೆಲಿವರಿ, ಇ-ಕಾಮರ್ಸ್ ಸಂಸ್ಥೆಗಳ ಅಪ್ಲಿಕೇಶನ್ ಬಳಕೆ ಮಾಡುವವರು ಈ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.
ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ವ್ಯವಹಾರದ ಮೇಲೆ ವಿಧಿಸುವ ಶುಲ್ಕವನ್ನು ನೇರವಾಗಿ ಗಿಗ್ ಕಾರ್ಮಿಕರ ಕಲ್ಯಾಣ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಗಿಗ್ ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆಗಾಗಿ ಜಾರಿಗೆ ತರುವ ಯೋಜನೆಗಳಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ನಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಮಸೂದೆ-2024 ಮಂಡನೆ ಮಾಡಲಾಗುತ್ತದೆ. ಮಸೂದೆಗೆ ಅಂಗೀಕಾರ ದೊರೆತರೆ ಶೇ 1 ರಿಂದ 2ರಷ್ಟು ಶುಲ್ಕ ಸಂಗ್ರಹ ಮಾಡಲು ಸರ್ಕಾರ ಆದೇಶವನ್ನು ಹೊರಡಿಸಲಿದೆ.
ಈ ಮಾದರಿ ಶುಲ್ಕದಿಂದ ಕಂಪನಿಗಳಿಗೆ ಯಾವುದೇ ರೀತಿಯ ಲಾಭವಾಗುವುದಿಲ್ಲ. ಈ ಶುಲ್ಕದ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಈ ವರ್ಷದ ಜೂನ್‌ನಲ್ಲಿಯೇ ಸರ್ಕಾರ ಗಿಗ್ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಮಸೂದೆ-2024 ಮಂಡನೆ ಮಾಡಲು ಮುಂದಾಗಿತ್ತು. ಆದರೆ ಬಳಿಕ ಅದನ್ನು ತಡೆಹಿಡಿಯಲಾಗಿತ್ತು.
ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ವ್ಯವಹಾರಗಳ ಮೇಲೆ ಅಗ್ರಿಗೇಟರ್ ಕಂಪನಿಗಳೇ ಶುಲ್ಕವನ್ನು ಸಂಗ್ರಹ ಮಾಡುತ್ತವೆ ಮತ್ತು ಅವುಗಳನ್ನು ತಕ್ಷಣ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ತೆರೆಯಲಾದ ಖಾತೆಗೆ ವರ್ಗಾವಣೆ ಮಾಡುತ್ತವೆ. ಸದ್ಯ ಪ್ರತಿ ವ್ಯವಹಾರದ ಮೇಲೆ ಶೇ 1 ರಿಂದ 2ರಷ್ಟು ಶುಲ್ಕ ಸಂಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ವ್ಯವಹಾರದ ಶುಲ್ಕ ಇದನ್ನು ಬಳಕೆ ಮಾಡುವ ಎಲ್ಲಾ ಗ್ರಾಹಕರಿಗೂ ಅನ್ವಯವಾಗುತ್ತದೆ. ಆಹಾರ ಮತ್ತು ಇ-ಕಾಮರ್ಸ್ ಮಾತ್ರವಲ್ಲ ರ‍್ಯಾಪಿಡೋ, ನಮ್ಮ ಯಾತ್ರಿ ಸೇರಿದಂತೆ ಟ್ಯಾಕ್ಸಿ ಸೇವೆ ಬಳಕೆ ಮಾಡುವವರು ಈ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರದಲ್ಲಿ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ಮೂಲಕ ಟ್ಯಾಕ್ಸಿ, ಆಹಾರ ವಿತರಣೆ, ದಿನಸಿ ವಸ್ತುಗಳು, ಆರೋಗ್ಯ ಸೇವೆ, ಔಷಧ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಅಪ್ಲಿಕೇಶನ್ ಮೂಲಕ ಜನರು ಬುಕ್ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಿಗದಿ ಮಾಡುವ ಶುಲ್ಕವನ್ನು ಪಾವತಿಸಬೇಕು.
ಕರ್ನಾಟಕ ಸರ್ಕಾರ ಜನರಿಂದ ಶುಲ್ಕ ಸಂಗ್ರಹ ಮಾಡಬೇಕೋ ಅಥವ ಕಂಪನಿಗಳು ರಾಜ್ಯದಲ್ಲಿ ನಡೆಸುವ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಇಂತಿಷ್ಟು ಶುಲ್ಕ ಸಂಗ್ರಹ ಮಾಡುವುದೋ ಎಂದು ಚರ್ಚಿಸಿತ್ತು. ಅಂತಿಮವಾಗಿ ಗ್ರಾಹಕರಿಂದಲೇ ಶುಲ್ಕ ಸಂಗ್ರಹಕ್ಕೆ ಕಂಪನಿಗಳು ಸಹ ಒಪ್ಪಿಗೆ ನೀಡಿದ್ದವು.
ಸಚಿವ ಸಂಪುಟ ಸಭೆಯಲ್ಲಿ ವಿಧಾನ ಮಂಡಲ ಅಧಿವೇಶದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಮಸೂದೆ-2024 ಮಂಡಿಸಲು ಒಪ್ಪಿಗೆ ನೀಡಬೇಕಿದೆ. ಕಾರ್ಮಿಕ ಇಲಾಖೆ ಮಾಹಿತಿ ಪ್ರಕಾರ ಶೇ 1 ರಿಂದ 5ರಷ್ಟು ಶುಲ್ಕ ಸಂಗ್ರಹ ಮಾಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಸರ್ಕಾರ ಶೇ 1 ರಿಂದ 2 ರಷ್ಟು ಶುಲ್ಕ ಸಂಗ್ರಹ ಮಾಡಲು ಒಪ್ಪಿಗೆ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications