ಮೈಸೂರು: ಬೈಕ್ ಹಿಂದೆ ಕೋಳಿಗಳಂತೆ ಐದು ಮಕ್ಕಳನ್ನ ತುಂಬಿಕೊಂಡು ಹೋದ ಭೂಪ
ಇತ್ತೀಚಿನ ದಿನಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನ ಗಾಳಿಗೆ ತೂರಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕರ್ನಾಟಕದಲ್ಲಿ ನಡೆದ ಅತ್ಯಂತ ಆಘಾತಕಾರಿ ಘಟನೆಯೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕಟ್ಟಿದ್ದ ಕಬ್ಬಿಣದ ಬುಟ್ಟಿಯೊಳಗೆ ಐದಕ್ಕೂ ಹೆಚ್ಚು ಮಕ್ಕಳನ್ನ ಕೋಳಿ ಮರಿಗಳಂತೆ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.

ಮೈಸೂರು-ನಂಜನಗೂಡು ರಸ್ತೆಯಲ್ಲಿ ನಡೆದ ಆಘಾತಕಾರಿ ಘಟನೆ
ವರದಿಗಳ ಪ್ರಕಾರ, ಈ ಘಟನೆ ಜನನಿಬಿಡವಾದ ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿ ನಡೆದಿದೆ. 'ಸನಾತನ ಕನ್ನಡ' ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಭಾನುವಾರದ ರಜಾ ದಿನವಾದ ಕಾರಣ ಊಟಿ ಮುಖ್ಯರಸ್ತೆಯಲ್ಲಿ ವಾಹನಗಳ ದಟ್ಟಣೆ ವಿಪರೀತವಾಗಿತ್ತು. ಇಂತಹ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಟಿವಿಎಸ್ ಎಕ್ಸೆಲ್ ಬೈಕ್‌ನ ಹಿಂಭಾಗದಲ್ಲಿ ಕಬ್ಬಿಣದ ಜಾಲರಿ ಅಥವಾ ಬುಟ್ಟಿಯಂತಹ ರಚನೆಯನ್ನ ಅಳವಡಿಸಿಕೊಂಡು, ಅದರಲ್ಲಿ ಐದು ಮಕ್ಕಳನ್ನ ಕೂರಿಸಿಕೊಂಡು ಪ್ರಯಾಣ ಬೆಳೆಸಿದ್ದಾನೆ.
ಕೋಳಿಗಳಂತೆ ಮಕ್ಕಳ ಸಾಗಾಟ
ಈ ವೈರಲ್ ವಿಡಿಯೋದಲ್ಲಿ ಕಾಣುವಂತೆ, ಬೈಕ್‌ನ ಹಿಂಭಾಗದ ಬುಟ್ಟಿಯಲ್ಲಿ ಐದು ಮಕ್ಕಳು ಕುಳಿತಿದ್ದರೆ, ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಮುಂಭಾಗದಲ್ಲಿ ಮತ್ತೊಂದು ಮಗು ಕುಳಿತಿತ್ತು. ಚಾಲಕ ಹೆಲ್ಮೆಟ್ ಧರಿಸಿದ್ದನಾದರೂ, ಆ ಮುಗ್ಧ ಮಕ್ಕಳು ಯಾವುದೇ ರೀತಿಯ ಸುರಕ್ಷತಾ ಕವಚಗಳನ್ನ ಧರಿಸಿರಲಿಲ್ಲ.
"ನಿನ್ನೆ ರಾತ್ರಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಟಿವಿಎಸ್ ಎಕ್ಸೆಲ್‌ನಲ್ಲಿ ಐದು ಮಕ್ಕಳನ್ನ ಕೋಳಿಗಳ ಲೋಡ್ ಸಾಗಿಸುವಂತೆ ಕರೆದೊಯ್ಯುತ್ತಿದ್ದಾನೆ. ಈ ಮಕ್ಕಳ ಸುರಕ್ಷತೆಯ ಬಗ್ಗೆ ಯಾರಿಗಾದರೂ ಕಾಳಜಿ ಇದೆಯೇ?" ಎಂದು ವಿಡಿಯೋ ಹಂಚಿಕೊಂಡವರು ಕ್ಯಾಪ್ಷನ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನೆಟ್ಟಿಗರ ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಇಷ್ಟೊಂದು ಮಕ್ಕಳನ್ನ, ಅದೂ ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಕರೆದೊಯ್ಯುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
"ಯಾವುದೇ ದ್ವಿಚಕ್ರ ವಾಹನವು ಕೇವಲ ಒಬ್ಬ ಚಾಲಕ ಮತ್ತು ಒಬ್ಬ ಹಿಂಬದಿ ಸವಾರನಿಗೆ ಮಾತ್ರ ಮೀಸಲಾಗಿದೆ. ಈ ರೀತಿ ವಾಹನ ಚಲಾಯಿಸುವುದು ನಾಚಿಕೆಗೇಡಿನ ಸಂಗತಿ ಮಾತ್ರವಲ್ಲ, ಇದು ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆ " ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Last night on the Mysuru–Nanjangud Road: a man carrying five children on a TVS XL two-wheeler, as if transporting a load of chickens.
— ಸನಾತನ (सनातन) (@sanatan_kannada) September 21, 2026
It was Sunday, a busy weekend, and the Ooty main road. Is anyone concerned about the safety of these children?
Vehicle No.: KA 09 JU 1459… pic.twitter.com/Arv77HDFLa
ಮಕ್ಕಳ ಜೀವದ ಜೊತೆ ಚೆಲ್ಲಾಟ
ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾರ್ವಜನಿಕರು ತಾವಾಗಿಯೇ ಎಚ್ಚೆತ್ತುಕೊಳ್ಳದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಹೆದ್ದಾರಿಗಳಲ್ಲಿ ವೇಗವಾಗಿ ಚಲಿಸುವ ವಾಹನಗಳ ಮಧ್ಯೆ ಈ ರೀತಿಯ ಪ್ರಯಾಣ ಎಷ್ಟೊಂದು ಅಪಾಯಕಾರಿ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
"ನಮ್ಮಲ್ಲಿ ಲೇನ್ ಶಿಸ್ತು ಇಲ್ಲದಿರುವಾಗ ಈ ರೀತಿಯ ಪ್ರಯಾಣಕ್ಕೆ ಅವಕಾಶ ನೀಡಬಾರದು. ಆ ವ್ಯಕ್ತಿ ಮುಗ್ಧ ಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾನೆ" ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಆಕಸ್ಮಿಕವಾಗಿ ವಾಹನ ಸ್ಕಿಡ್ ಆದರೂ ಅಥವಾ ಹಿಂದಿನಿಂದ ಬರುವ ಯಾವುದಾದರೂ ವಾಹನ ಡಿಕ್ಕಿ ಹೊಡೆದರೂ ಮಕ್ಕಳ ಪ್ರಾಣಕ್ಕೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಅಥವಾ ಟ್ರಾಫಿಕ್ ಪೊಲೀಸರು ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಕೇವಲ ಹಣ ಉಳಿಸಲು ಅಥವಾ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಈ ರೀತಿ ಜೀವದ ಹಂಗು ತೊರೆದು ಪ್ರಯಾಣಿಸುವುದು ಯಾವ ದೃಷ್ಟಿಯಿಂದಲೂ ಸಮರ್ಥನೀಯವಲ್ಲ. ಈ ಘಟನೆಯು ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಎಚ್ಚರಿಕೆಯ ಗಂಟೆ ಬಾರಿಸಿದೆ.


Click it and Unblock the Notifications
