Jowar Price in Karnataka: ರಾಜ್ಯದ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಜೋಳದ ದರ ಏರಿಳಿತ; ದಾವಣಗೆರೆಯಲ್ಲಿ ರೂ.5,700 ಬೆಲೆ
ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಪ್ರಮುಖವಾಗಿರುವ ಜೋಳವನ್ನು (Jowar) ಉತ್ತಮ ಪ್ರಮಾಣದಲ್ಲಿ ಬೆಳೆಯಲಾಗಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಬೆಳೆ ಹೆಚ್ಚು ಬೆಳೆಯಲಾಗುತ್ತದೆ. ಇದೀಗ ಶಿವರಾತ್ರಿ ಹೊತ್ತಿಗೆ ಜೋಳ ಕಟಾವಿಗೆ ಬಂದಿದೆ. ತಡವಾಗಿ ಬಿತ್ತನೆ ಮಾಡಿದ ರೈತರು ಈ ತಿಂಗಳಾಂತ್ಯದಲ್ಲಿ ಕಟಾವು ಮಾಡಲಿದ್ದಾರೆ. ಈ ಬಾರಿ ಜೋಳ (Jowar) ಮಾರಾಟ ಸ್ಥಿತಿ ಹೇಗಿರಲಿದೆ? ರಾಜ್ಯದ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಬೆಲೆ ಎಷ್ಟಿದೆ? ಎಂಬ ಅಪ್ಡೇಟ್ ಮಾಹಿತಿ ಇಲ್ಲಿದೆ.
ಪ್ರಸಕ್ತ ವರ್ಷ ಉತ್ತಮ ಮಳೆ ಆಗಿದ್ದು, ಮುಂಗಾರು ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳ (Maize) ಬೆಳೆಯಲಾಗಿತ್ತು. ಆದರೆ ಉತ್ತಮ ಬೆಲೆ ಸಿಗದೇ, ಸಕಾಲಕ್ಕೆ ಸರ್ಕಾರ ಖರೀದಿ ಮಾಡದೇ ರೈತರಿಗೆ ತೊಂದರೆ ಉಂಟಾಗಿತ್ತು. ಅದೆಷ್ಟೋ ರೈತರು ಇಂದಿಗೂ ಮೆಕ್ಕೆಜೋಳ (ಗೋವಿನಜೋಳ, ಮುಸುಕಿನ ಜೋಳ-Corn) ಬೆಳೆ ಮಾರಾಟ ಮಾಡದೇ ಉತ್ತಮ ಬೆಲೆಗಾಗಿ ಕಾಯ್ದಿಟ್ಟುಕೊಂಡಿದ್ದಾರೆ.

ಇಂಥದ್ದೇ ಪರಿಸ್ಥಿತಿ ಜೋಳಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಪ್ರತಿ ಬಾರಿಯು ಹೆಚ್ಚಿನ ಪ್ರಮಾಣದಲ್ಲಿ ಜೋಳ ಬಿತ್ತನೆ ಆಗುತ್ತಿತ್ತು. ಈ ಹಿಂಗಾರು ಅವಧಿಯಲ್ಲಿ ರೈತರು ವಾಣಿಜ್ಯ ಬೆಳೆಯಾದ ಕಡಲೆ, ಕುಸುಬಿ ಹಾಗೂ ಇನ್ನಿತರ ಬೆಳೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಹೇರಳ ಪ್ರಮಾಣದಲ್ಲಿ ಜೋಳ ಬಿತ್ತನೆ ಆಗಿಲ್ಲ. ಆದ್ದರಿಂದ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಜೋಳ ಪೂರೈಕೆಗೆ ಬೆಳೆ ದಿಢೀರ್ ಕುಸಿಯುವ ಆತಂಕ ಕಡಿಮೆ ಇದೆ. ಆದರೂ ಮಧ್ಯವರ್ತಿಗಳ ಹಾವಳಿ, ಅಧಿಕ ಲಾಭದ ದುರಾಸೆ ಮತ್ತು ಇನ್ನಿತರ ಕಾರಣಗಳಿಂದ ಜೋಳಕ್ಕೆ ಬೆಲೆ ಕುಸಿಯದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಮೆಕ್ಕೆಜೋಳ ಬೆಳೆದ ರೈತರಿಗೆ ಬಂದ ಸ್ಥಿತಿ ಜೋಳದ ರೈತರಿಗೆ ಬಾರದಂತೆ ಎಚ್ಚರ ವಹಿಸಬೇಕಿದೆ.
ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಜೋಳದ ದರ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಜೋಳ ಪ್ರತಿ ಕ್ವಿಂಟಾಲ್ ದರವು ರೂ.1449 ರಿಂದ ಗರಿಷ್ಠ 5,700 ರೂಪಾಯಿವರೆಗೆ ಇದೆ. ಒಂದೊಂದು ತಾಲೂಕು, ಪಟ್ಟಣದ ಎಪಿಎಂಸಿಗಳಲ್ಲಿ ಒಂದೇ ತೆರನಾದ ದರ ಕಂಡು ಬಂದಿಲ್ಲ. ಹುಬ್ಬಳ್ಳಿಯ ಅಮರಗೋಳದಲ್ಲಿ ಪ್ರತಿ ಕ್ವಿಂಟಾಲ್ ಜೋಳದ ದರ ಕನಿಷ್ಠ 1449 ರೂ. ಗರಿಷ್ಠ 3100 ರೂ. ಇದ್ದು, ಇದು ಅತೀ ಕಡಿಮೆ ದರವಾಗಿದೆ.
ದಾವಣಗೆರೆಯಲ್ಲಿ ಜೋಳಕ್ಕೆ ಅಧಿಕ ಬೆಲೆ
ಇನ್ನೂ ಅತೀ ಹೆಚ್ಚು ದರ ದಾವಣಗೆರೆ ಮಾರುಕಟ್ಟೆಯಲ್ಲಿ ದಾಖಲಾಗಿದೆ. ಇಲ್ಲಿ ಒಂದು ಕ್ವಿಂಟಾಲ್ ಜೋಳಕ್ಕೆ ಗರಿಷ್ಠ ಮತ್ತು ಕನಿಷ್ಠ ಎರಡು 5700 ರೂಪಾಯಿ ಇದೆ. ಬಿಜಾಪುರದಲ್ಲಿ ಗರಿಷ್ಠ ಮತ್ತು ಕನಿಷ್ಠ ಎರಡು ದರ 3023 ರೂಪಾಯಿ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕನಿಷ್ಠ 2800 ರೂಪಾಯಿ ಹಾಗೂ ಗರಿಷ್ಠ 2900 ರೂಪಾಯಿಗೆ ಕ್ವಿಂಟಾಲ್ ಜೋಳ ಮಾರಾಟವಾಗಿದೆ.
ರಾಯಚೂರಿನ ಸಿಂಧನೂರಿನಲ್ಲಿ ಪ್ರತ್ಯೇಕ ಮೂರು ನಾಲ್ಕು ಕಡೆಗಳಲ್ಲಿ ಬೇರೆ ಬೇರೆ ರೀತಿಯ ದರ ನಿಗದಿ ಆಗಿರುವುದು ವಿಶೇಷ. ಇಲ್ಲಿ ಕನಿಷ್ಠ 2500, 2700, 2651 ರೂಪಾಯಿ ಮತ್ತು ಗರಿಷ್ಠ 3901, 2800, 2950 ರೂಪಾಯಿ ನಿಗದಿ ಮಾಡಲಾಗಿದೆ.
ಜೋಳದಲ್ಲಿ ಎರಡು ವಿಧ
ಹೈಬ್ರೀಡ್ ಮತ್ತು ಬಿಳಿ ಜೋಳ ಎಂದು ಜೋಳ ಬೆಳೆಯಲ್ಲಿ ಎರಡು ವಿಧವಿದೆ. ಕರ್ನಾಟಕದ ರಾಯಚೂರು, ಕಲಬುರಗಿ, ಹಾವೇರಿ, ರಾಣಿಬೆನ್ನೂರು, ಗದಗ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಸೇರಿ ವಿವಿಧೆಡೆ ಜೋಳ ಬೆಳೆಯಲಾಗುತ್ತದೆ. ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿ ಒಂದೆರಡು ಜಿಲ್ಲೆಗಳಲ್ಲೂ ಜೋಳ ಬೆಳೆಯಲಾಗುತ್ತದೆ.












Click it and Unblock the Notifications