Kannada: "ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕನ್ನಡ ಬರಲ್ಲ ಅನ್ನೋದು ರಾಜ್ಯಕ್ಕೇ ತಿಳಿದ ವಿಚಾರ"
ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸರಿಯಾಗಿ ಕನ್ನಡ ಬರಲ್ಲ ಎಂದು ವಿದ್ಯಾರ್ಥಿಯೊಬ್ಬ ಅವರ ಮುಂದೆಯೇ ಹೇಳಿದ್ದು, ಇದು ಮಧು ಬಂಗಾರಪ್ಪ ಅವರನ್ನು ಕೆರಳಿಸಿದೆ. ಇದರಿಂದ ಕೋಪಗೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಆ ಹುಡುಗನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲೇ ಆದೇಶಿಸಿದ್ದಾರೆ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮೊದಲು ಶಿಕ್ಷಣ ಸಚಿವರು ಕನ್ನಡ ಕಲಿಯಲಿ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೇಳಿದ್ದಾರೆ.
ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಿರುವ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಅವರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಶಿಕ್ಷಣ ಸಚಿವರು ಸ್ಫುಟವಾಗಿ ಕನ್ನಡವನ್ನು ಮಾತನಾಡಲು, ಬರೆಯಲು, ಓದಲು ಹಾಗೂ ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ ಹಾಗೂ ಪತ್ರಕರ್ತರಿಂದ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವ ದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ. ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಅಲ್ಲದೇ ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದೂ ಅವರು ಆಗ್ರಹಿಸಿದ್ದಾರೆ.
ಸಚಿವರ ಕೋಪಕ್ಕೆ ಆಕ್ರೋಶ: ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಯ ಮೇಲೆ ಗರಂ ಆಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿ ತಿಳಿಯದೆ ತಪ್ಪು ಮಾಡಿರಬಹುದು. ಆದರೆ, ಅವನ ಮೇಲೆ ಈ ರೀತಿ ಗರಂ ಆಗುವುದು ಹಾಗೂ ಕ್ರಮ ತೆಗೆದುಕೊಳ್ಳಿ ಎಂದು ಹೇಳುವುದು ಎಷ್ಟು ಸರಿ. ಸಣ್ಣ ಹುಡುಗ ಅವನಿಗೆ ಬುದ್ಧಿ ಮಾತು ಹೇಳಿದ್ದರೆ ಸಾಕಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು ?
ನವೆಂಬರ್ 20 ರಂದು (ಬುಧವಾರ) ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡುತ್ತಿರುವಾಗಲೇ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಜೋರಾಗಿ ಕಿರುಚಿದ್ದಾನೆ. ಇದನ್ನು ಕೇಳಿರುವ ಮಧು ಬಂಗಾರಪ್ಪ ಅವರು ಗರಂ ಆಗಿದ್ದಾರೆ. ಮೊದಲು ನಕ್ಕ ಅವರು ಕೂಡಲೇ ಯಾರ್ರಿ ಅದು ಅವರ ಮೇಲೆ ಆಕ್ಷನ್ ತಗೊಳ್ರಿ ನಾನು ಇದನ್ನೆಲ್ಲ ಸಹಿಸಲ್ಲ ಎಂದಿದ್ದರು.
ಈ ರೀತಿ ವಿದ್ಯಾರ್ಥಿ ಹೇಳುತ್ತಿದ್ದಂತೆಯೇ ಮಧು ಬಂಗಾರಪ್ಪ ಅವರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಮೊದಲು ನಗುತ್ತಲ್ಲೇ ಲೋ ಯಾರೋ ಅದು ಅಂತ ಕೇಳಿದ್ರು. ಅಲ್ಲದೇ ನಾನೇನು ಇಲ್ಲಿ ಉರ್ದುವಿನಲ್ಲಿ ಮಾತಾಡ್ತಾ ಇದ್ದೀನಾ. ಆ ಮೀಡಿಯಾದವರೇನೋ ತೋರಿಸುತ್ತಾರೆ ಎಂದರು. ಆ ಮೇಲೆ ಸಚಿವರ ಪಕ್ಕದಲ್ಲೇ ಕುಳಿತಿದ್ದ ಅಧಿಕಾರಿಗಳಿಗೆ ಅವನು ಯಾರು ಅಂತ ಮೊದಲು ನೋಡಿ ಅವನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನಾನು ಈ ರೀತಿ ಮಾಡುವುದನ್ನೆಲ್ಲ ಪ್ರೋತ್ಸಾಹಿಸುವುದಿಲ್ಲ ಎಂದು ಕೋಪವಾಗಿ ಹೇಳಿದ್ದಾರೆ.












Click it and Unblock the Notifications