IAS Officers Transfer: ಬೆಂಗಳೂರು ಜಲಮಂಡಳಿ ಸೇರಿ ಹಲವು ಇಲಾಖೆಗೆ ಹೊಸ ಸಾರಥಿ, ಬದಲಾಗುತ್ತಾ ಗತಿ?
ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.
ರಾಜಧಾನಿ ಬೆಂಗಳೂರಿನ ಪ್ರಮುಖ ಹುದ್ದೆಗಳಾದ ಜಲಮಂಡಳಿ, ಕೆಪಿಟಿಸಿಎಲ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗಳಿಗೆ ಹೊಸ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಜಲಮಂಡಳಿಗೆ ಹೊಸ ಸಾರಥಿ ಡಾ. ಮಂಜುಳಾ ಎನ್
ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಡಾ. ಮಂಜುಳಾ ಎನ್. ಅವರನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ ನಿರ್ವಹಣೆ, ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳು ಮುಂತಾದ ಸವಾಲುಗಳಿರುವ ಬೆನ್ನಲ್ಲೇ ಜಲಮಂಡಳಿಗೆ ಹೊಸ ಸಾರಥಿಯನ್ನು ನೇಮಕ ಮಾಡಲಾಗಿದೆ.
ಇಲ್ಲಿಯವರೆಗೆ ಜಲಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ರಾಮ್ ಪ್ರಸಾತ್ ಮನೋಹರ್ ವಿ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಇನ್ನು ಮುಂದೆ ಇವರ ಮೇಲಿರಲಿದೆ.
ಬೆಂಗಳೂರು ನಗರ ಡಿಸಿ ಜಗದೀಶ ಜಿ. ಎತ್ತಂಗಡಿ
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜಗದೀಶ ಜಿ. ಅವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ಅವರನ್ನು ಹೊಸದಾಗಿ ರಚನೆಯಾಗುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 'ಬೆಂಗಳೂರು ಕೇಂದ್ರ ನಗರ ಪಾಲಿಕೆ'ಯ ಕಮಿಷನರ್ ಆಗಿ ನೇಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಬಿಎಂಪಿ ವಿಭಜನೆ ಹಾಗೂ ಗ್ರೇಟರ್ ಬೆಂಗಳೂರು ಪರಿಕಲ್ಪನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಜಗದೀಶ ಜಿ. ಅವರ ಈ ಹೊಸ ಹುದ್ದೆಯ ನೇಮಕ ತೀವ್ರ ಮಹತ್ವ ಪಡೆದುಕೊಂಡಿದೆ.
ನೂತನ ಜಿಲ್ಲಾಧಿಕಾರಿಯಾಗಿ ಕಾಂತರಾಜು ಪಿ.ಎಸ್ ನೇಮಕ
ಜಗದೀಶ ಜಿ. ಅವರ ವರ್ಗಾವಣೆಯಿಂದ ತೆರವಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಥಾನಕ್ಕೆ ಐಎಎಸ್ ಅಧಿಕಾರಿ ಕಾಂತರಾಜು ಪಿ.ಎಸ್. ಅವರನ್ನು ನೇಮಿಸಲಾಗಿದೆ. ಕಾಂತರಾಜು ಅವರು ಈ ಮೊದಲು ಬೆಂಗಳೂರಿನ ಸಹಕಾರ ಸಂಘಗಳ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರು ರಾಜಧಾನಿಯ ಅತಿ ಪ್ರಮುಖ ಕಂದಾಯ ಹುದ್ದೆಯಾದ ಡಿಸಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಕಂದಾಯ, ಕಾನೂನು ಸುವ್ಯವಸ್ಥೆ, ಭೂ ವಿವಾದಗಳ ನಿರ್ವಹಣೆ, ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ.
Karnataka IAS reshuffle: Dr Manjula N, Secretary, Electronics, IT, BT & Science & Technology Department, has been appointed BWSSB Chairperson, replacing Dr Ram Prasath Manohar V, who has been posted as KPTCL Managing Director.
— ChristinMathewPhilip (@ChristinMP_) June 5, 2026
Bengaluru Urban Deputy Commissioner Jagadeesha G… pic.twitter.com/e0mup1dRUm
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಡಿಪಿಎಆರ್ (ಸರ್ವೀಸಸ್-1) ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ಜೂನ್ 5ರಂದು ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದ್ದಾರೆ. ಆಡಳಿತದಲ್ಲಿ ಮತ್ತಷ್ಟು ಚುರುಕು ಮುಟ್ಟಿಸುವ ಮತ್ತು ಮಹಾನಗರದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ದೃಷ್ಟಿಯಿಂದ, ಮುಂದಿನ ಆದೇಶದವರೆಗೆ ಈ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.












Click it and Unblock the Notifications