ದಾಂಪತ್ಯದಲ್ಲಿ ಇಂಟರೆಸ್ಟ್ ಇಲ್ಲ: ಪತಿಯ ಡಿವೋರ್ಸ್ ಅರ್ಜಿಗೆ ಮದ್ವೆ ಒಪ್ಪಂದವಲ್ಲ, ಪವಿತ್ರ ಸಂಸ್ಕಾರವೆಂದ ಹೈಕೋರ್ಟ್
ಬೆಂಗಳೂರು: ದಾಂಪತ್ಯವೆಂದರೆ ಒಂದು ಬರುತ್ತೆ, ಹೋಗುತ್ತೆ. ಕೊಟ್ಟು ತೆಗೆದುಕೊಳ್ಳುವುದರ ಲೆಕ್ಕವಿಟ್ಟರದು ಮುಗಿಯದ ಕಥೆ. ಆದರೆ, ಪತ್ನಿಯೊಂದಿಗೆ ಸಂಸಾರ ನಡೆಸಲು ಆಸಕ್ತಿಯೇ ಇಲ್ಲವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿಗೆ ಕರ್ನಾಟಕ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಪ್ರೀತಿಸಿ ಮದುವೆಯಾಗಿ, ಇದೀಗ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಸಮಯದಲ್ಲಿ ಮದುವೆಯಲ್ಲಿ ಆಸಕ್ತಿವಿಲ್ಲವೆಂಬ ಕಾರಣ ನೀಡಿದರೆ ಆಗದೆಂದು ನ್ಯಾಯಪೀಠ ಅಸಾಮಧಾನ ವ್ಯಕ್ತಪಡಿಸಿದೆ.
ಏನಿದು ಘಟನೆ ?
ಮೈಸೂರು ಮೂಲದ ವ್ಯಕ್ತಿಯೊಬ್ಬರು ಪ್ರೀತಿಸಿ ಮದುವೆಯಾಗಿ, ವಯಸ್ಕಳಾಗುತ್ತಿರುವ ಹೆಣ್ಣು ಮಗುವಿನ ತಂದೆಯಾಗಿ ತನಗೆ ದಾಂಪತ್ಯದಲ್ಲಿ ಆಸಕ್ತಿಯೇ ಇಲ್ಲ. ಡಿವೋರ್ಸ್ ಬೇಕೆಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೈಸೂರು ಕೋರ್ಟ್ ಅರ್ಜಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಬಾಗಿಲು ತಟ್ಟಿದ್ದರು. ಕರ್ನಾಟಕ ಹೈ ಕೋರ್ಟ್ ಸಹ ವಿವಾಹವೆಂಬುವುದು ಒಪ್ಪಂದವಲ್ಲ, ಅದೊಂದು ಸಂಸ್ಕಾರವೆಂದು ಹೇಳಿ ವಿಚ್ಛೇದನ ನೀಡಲು ನಿರಾಕರಿಸಿದೆ.

ಹಿಂದೂ ಕಾನೂನಿನಲ್ಲಿ ಮದುವೆ ಎಂಬುವುದು ಕೇವಲ ಒಪ್ಪಂದವಲ್ಲ. ಅದೊಂದು ಜೀವಿತಾವಧಿಯ ಸಂಸ್ಕಾರ. ಪತ್ನಿ, ಮಗಳ ಹೊಣೆ ತೆಗೆದುಕೊಳ್ಳುವ ಈ ಸಂದರ್ಭದಲ್ಲಿ ದಾಂಪತ್ಯ ಜೀವನದಲ್ಲಿ ಆಸಕ್ತಿವಿಲ್ಲವೆಂದು ಮದುವೆ ಎಂಬ ಪಾವತ್ರ್ಯ ಬಂಧನದಿಂದ ಹೊರ ನಡೆಯಲು ಸಾಧ್ಯವಿಲ್ಲವೆಂದು ಕೋರ್ಟ್ ಬುದ್ಧಿ ಹೇಳಿದೆ.
2003ರಲ್ಲಿ ಈ ಜೋಡಿ ಪ್ರೇಮ ವಿವಾಹವಾಗಿತ್ತು. 23 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಯಸ್ಕ ಮಗಳಿದ್ದಾಳೆ. ದಾಂಪತ್ಯ ಮುಂದುವರಿಸಲು ಆಸಕ್ತಿವಿಲ್ಲವೆಂದು ಗಂಡ 2019ರಲ್ಲಿ ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಪತ್ನಿ ದಾಂಪತ್ಯ ಹಕ್ಕುಗಳ ಮರುಸ್ಥಾಪನೆ ಕೋರಿ ಅರ್ಜಿ ಹಾಕಿದ್ದರು. ಪತಿಯ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ದಾಂಪತ್ಯ ಮುಂದುವರಿಸುವಂತೆ ಆದೇಶಿಸಿತ್ತು. ಈ ಆದೇಶದ ನಂತರವೂ ಈ ಜೋಡಿ ಜೊತೆಯಾಗಿ ವಾಸಿಸುತ್ತಿರಲಿಲ್ಲ. ಮದುವೆ ಸಂಪೂರ್ಣವಾಗಿ ಮುರಿದು ಬಿದ್ದಿದೆ ಎಂದು ವಾದಿಸಿ, ಮತ್ತೊಮ್ಮೆ 2024ರಲ್ಲಿ ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ಪತಿ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪತಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈ ಕೋರ್ಟ್ ಸಹ ಮೈಸೂರಿನ ಕೌಟುಂಬಿಕ ನ್ಯಾಯಾಲದ ಆದೇಶವನ್ನು ಎತ್ತಿ ಹಿಡಿದಿದ್ದು, ದಾಂಪತ್ಯದ ಪಾವಿತ್ರ್ಯತೆಯನ್ನು ಒತ್ತಿ ಹೇಳಿದೆ. ಪತಿಯ ಡಿವೋರ್ಸ್ ಮೇಲ್ಮನವಿಯನ್ನು ವಜಾಗೊಳಿಸಿದೆ.
ಭಾರತದಲ್ಲಿ ಡಿವೋರ್ಸ್ ಕಡಿಮೆ
ಜಾಗತಿಕಕವಾಗಿ ಹೋಲಿಸಿದಲ್ಲಿ ಭಾರತದಲ್ಲಿ ವಿಚ್ಛೇದನ ಪಡೆಯುವ ಸಂಖ್ಯೆ ತುಸು ಕಡಿಮೆಯಾಗಿದ್ದು, ಇತ್ತೀಚೆಗೆ ಹೆಚ್ಚುತ್ತಿರುವುದು ಸುಳ್ಳಲ್ಲ. ಅದರಲ್ಲಿಯೂ ಬೆಂಗಳೂರು, ದೆಹಲಿ ಹಾಗೂ ಮುಂಬೈನಂಥ ಮಹಾ ನಗರಗಳಲ್ಲಿ ದಿನೆ ದಿನೇ ಡಿವೋರ್ಸ್ ಸಂಖ್ಯೆ ಹೆಚ್ಚಾಗುತ್ತಿದ್ದು, ಒತ್ತಡ, ಸಾಮಾಜಿಕ ಕಟ್ಟುಪಾಡಿಗೆ ಬೆಲೆ ಕೊಡದಿರುವುದು, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಸೇರಿ ಹಲವು ಕಾರಣಗಳನ್ನು ಈ ಟ್ರೆಂಡ್‌ಗೆ ನೀಡಲಾಗುತ್ತಿದೆ.
2020ರಲ್ಲಿ ಕರ್ನಾಟಕದಲ್ಲಿ ಸುಮಾರು 20,454 ವಿಚ್ಛೇದನ ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 24 ಸಾವಿರ, 2022ರಲ್ಲಿ 67 ಸಾವಿರ, 2023ರಲ್ಲಿ 41 ಸಾವಿರ, 2024ರಲ್ಲಿ ಈ ಸಂಖ್ಯೆ ತುಸು ಇಳಿಕೆಯಾಗಿ 37 ಸಾವಿರ ಡಿವೋರ್ಸ್ ಅರ್ಜಿಗಳು ಸಲ್ಲಿಸಲ್ಪಿಟ್ಟಿದ್ದವು. ಆದರೆ, ಈ ಸಂಖ್ಯೆ 2025ರಲ್ಲಿ ಸುಮಾರು 34 ಸಾವರದಷ್ಟಿದ್ದವು. ಕೋವಿಡ್ ಸಮಯದಲ್ಲಿ ದಾಂಪತ್ಯ ಬಿರುಕು ಹೆಚ್ಚಾಗಿತ್ತು ಎಂದು ವರದಿಯಾಗಿತ್ತು.
ದಾಂಪತ್ಯವೆಂದರೆ ಎಲ್ಲವೂ ಸುಸೂತ್ರವಾಗಿಯೇ ಇರೋಲ್ಲ. ಅಪ್ಸ್ ಆ್ಯಂಡ್ ಡೌನ್ಸ್ ಸಹಜವಾಗಿಯೇ ಇರುತ್ತದೆ. ಅವನ್ನು ಇಗ್ನೋರ್ ಮಾಡದೇ, ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂಬುವುದು ಭಾರತದಲ್ಲಿರುವ ನಂಬಿಕೆ. ಸಮಾಜದ ಕಟ್ಟುಪಾಡಿಗಳಿಂದಲೋ ಏನೋ ಭಾರತದಲ್ಲಿ ಡಿವೋರ್ಸ್ ಸಂಖ್ಯೆ ಇನ್ನೂ ಕಡಿಮೆ ಇದೆ. ಸಣ್ಣ ಪುಟ್ಟ ವಿಷಯಗಳಿಗೂ ವಿಚ್ಛೇದನವೆಂದು ಕೋರ್ಟ್ ಬಾಗಿಲು ತಟ್ಟಿದರೆ, ದಿನಕ್ಕೆ ನೂರಾರು ಜೋಡಿಗಳು ಬೇರೆಯಾಗುತ್ತವೆ. ಅದರಲ್ಲಿಯೂ ಒಂದೆರಡು ದಶಕಗಳ ಕಾಲ ಒಟ್ಟಿಗೆ ಸಂಸಾರ ಮಾಡಿ, ಮಕ್ಕಳು, ಸಂಸಾರದ ಹೊಣೆ ಹೊರಬೇಕಾದ ಕಾಲದಲ್ಲಿ ಡಿವೋರ್ಸ್ ನೀಡಿ ಎಂದು ಕೋರ್ಟ್ ಕದ ತಟ್ಟಿದರೆ ಹೇಗೆ?


Click it and Unblock the Notifications
