ಸಹಪಾಠಿಯ ಇನ್‌ಸ್ಟಾಗ್ರಾಮ್ ಫೋಟೋಗೆ Pretty ಎಂದಿದ್ದಕ್ಕೆ ಎಫ್‌ಐಆರ್‌: 'Gen-Z' ಭಾಷೆ ಅಪರಾಧವಲ್ಲ ಎಂದ ಹೈಕೋರ್ಟ್‌, ಕೇಸ್ ರದ್ದು

ಬೆಂಗಳೂರು: ಕಾಲೇಜು ಸಹಪಾಠಿಯ ಇನ್‌ಸ್ಟಾಗ್ರಾಮ್ ಫೋಟೋವೊಂದಕ್ಕೆ ಕೇವಲ 'ಪ್ರಿಟಿ' ಎಂದು ಕಳುಹಿಸಿದ್ದ ಕಮೆಂಟ್‌ ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಯೊಬ್ಬನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇಂದಿನ ಯುವಜನತೆ ಅಂದರೆ ಜೆನ್‌- ಜೀ ಪೀಳಿಗೆಯವರು ಮಾತನಾಡುವ ಈ ಭಾಷಾ ಶೈಲಿಯನ್ನ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ.

20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ 21 ವರ್ಷದ ಸಹಪಾಠಿ ವಿದ್ಯಾರ್ಥಿನಿಯೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಫೋಟೋಗೆ ಮೆಸೇಜ್ ಮೂಲಕ 'ಪ್ರಿಟಿ' ಎಂದು ಪ್ರತಿಕ್ರಿಯಿಸಿದ್ದ. ಈ ಸಂದೇಶಕ್ಕೆ ಆ ಯುವತಿ 'ಥ್ಯಾಂಕ್ಸ್' ಎಂದು ಕೂಡ ರಿಪ್ಲೈ ಕಳುಹಿಸಿದ್ದಳು. ಇದು ಇಬ್ಬರು ವಿದ್ಯಾರ್ಥಿಗಳ ನಡುವಿನ ಖಾಸಗಿ ಸಂಭಾಷಣೆಯಾಗಿದ್ದು, ಸಾರ್ವಜನಿಕವಾಗಿ ಮಾಡಿದ ಕಾಮೆಂಟ್ ಅಲ್ಲ ಎಂದು ನ್ಯಾಯಾಲಯ ಗಮನಸೆಳೆದಿದೆ.

Karnataka High Court

ಇಂದಿನ ವಿದ್ಯಾರ್ಥಿಗಳು ಇದೇ ರೀತಿಯ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ, ಅದನ್ನು ಅಪರಾಧವೆಂದು ಬಿಂಬಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮೌಖಿಕವಾಗಿ ಹೇಳಿದೆ.

IPS ಅಧಿಕಾರಿಯ ದೂರು

ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಲು ಮುಖ್ಯ ಕಾರಣ ಯುವತಿಯ ತಂದೆ. ಯುವತಿಯ ತಂದೆ ಕರ್ನಾಟಕ ಕೆಡರ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಗಳ ಖಾತೆಯಲ್ಲಿದ್ದ ಈ ಇನ್‌ಸ್ಟಾಗ್ರಾಮ್ ಡೈರೆಕ್ಟ್ ಮೆಸೇಜ್‌ ನೋಡಿದ ಅವರು, ವಿದ್ಯಾರ್ಥಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ವಿದ್ಯಾರ್ಥಿಯ ವಿರುದ್ಧ ಮಹಿಳೆಯ ಘನತೆಗೆ ಚ್ಯುತಿ ತರುವ ಯತ್ನ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E ಅಂದರೆ ಗೌಪ್ಯತೆ ಉಲ್ಲಂಘನೆ ಅಡಿ ಎಫ್‌ಐಆರ್ ದಾಖಲಿಸಿದ್ದರು. ಕೇವಲ ಒಂದು ಪದದ ಮೆಸೇಜ್‌ಗೆ ಇಷ್ಟೆಲ್ಲಾ ಗಂಭೀರ ಸೆಕ್ಷನ್‌ಗಳನ್ನ ಹಾಕಿರುವುದು ಅಚ್ಚರಿಗೆ ಕಾರಣವಾಗಿತ್ತು.

ಕ್ರಿಕೆಟರ್ ಭವಿಷ್ಯಕ್ಕೆ ಕಂಟಕವಾಗಿದ್ದ ಪ್ರಕರಣ ವಜಾ

ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ವಿದ್ಯಾರ್ಥಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು , "ವಿದ್ಯಾರ್ಥಿಯು ರಾಜ್ಯಮಟ್ಟದ ಅಂಡರ್-19 ಕ್ರಿಕೆಟ್ ಆಟಗಾರನಾಗಿದ್ದು, ತಮಿಳುನಾಡಿನಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಆಡಬೇಕಿತ್ತು. ಆದರೆ ಈ ದೂರಿನಿಂದ ಆತನ ಕ್ರೀಡಾ ಭವಿಷ್ಯಕ್ಕೆ ತೊಂದರೆಯಾಗಿದೆ" ಎಂದು ವಾದ ಮಂಡಿಸಿದರು. ಅಲ್ಲದೆ, ತನಿಖೆಯ ಹೆಸರಿನಲ್ಲಿ ಪೊಲೀಸರು ಆತನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ ಅನ್ನು ಜಪ್ತಿ ಮಾಡಿದ್ದು, ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಸುಮಾರು ಎರಡು ವರ್ಷಗಳ ಕಾಲ ತಮ್ಮ ವಶದಲ್ಲೇ ಇಟ್ಟುಕೊಂಡಿದ್ದರು ಎಂಬ ಅಂಶವನ್ನ ನ್ಯಾಯಾಲಯದ ಗಮನಕ್ಕೆ ತಂದರು.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮಹತ್ವದ ಆದೇಶ

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಇದು ಕೇವಲ ಇಬ್ಬರು ಸಹಪಾಠಿಗಳ ನಡುವಿನ ಸಾಮಾನ್ಯ ಸಂಭಾಷಣೆಯಾಗಿದ್ದು, ಇದರಲ್ಲಿ ಯಾವುದೇ ರೀತಿಯ ದುರುದ್ದೇಶ ಅಥವಾ ಮಹಿಳೆಗೆ ಕಿರುಕುಳ ನೀಡುವ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಇನ್‌ಸ್ಟಾಗ್ರಾಮ್‌ನಲ್ಲಿ ಯುವಕ 'ಪ್ರಿಟಿ' ಎಂದಾಗ , ಯುವತಿ ಖುಷಿಯಿಂದಲೇ 'ಥ್ಯಾಂಕ್ಸ್' ಎಂದಿದ್ದಾಳೆ. ಇದು ಇಂದಿನ ಜನರೇಷನ್ ಝೆಡ್ (Gen Z) ಭಾಷೆ. ಇದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಎಷ್ಟು ಸರಿ?" ಎಂದು ನ್ಯಾಯಾಲಯ ಪ್ರಶ್ನಿಸಿದೆ.

ವಿದ್ಯಾರ್ಥಿಯ ವಿರುದ್ಧದ ಎಫ್‌ಐಆರ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ಹೈಕೋರ್ಟ್, ಪೊಲೀಸರ ವಶದಲ್ಲಿರುವ ಆತನ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳನ್ನು ತಕ್ಷಣವೇ ಹಿಂದಿರುಗಿಸುವಂತೆ ತನಿಖಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+