ರಾಜ್ಯದಲ್ಲಿ ಹೆಚ್ಚಿದ ಹೆಣ್ಣು ಭ್ರೂಣ ಪತ್ತೆ & ಗರ್ಭಪಾತ: ಹೈಕೋರ್ಟ್ ಕಳವಳ
ಬೆಂಗಳೂರು ಜುಲೈ 26: ಮೈಸೂರು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಲ್ಲಿನ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ ಗರ್ಭಪಾತಕ್ಕೆ ಪ್ರೇರೇಪಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಅಲ್ಲದೇ ಭ್ರೂಣ ಹತ್ಯೆಗೆ ಪ್ರೇರೇಪಿಸಿದ್ದ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಸೂಚನೆ ನೀಡಿದೆ.

ಪ್ರಕರಣದ ಆರೋಪಿಗಳಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದ ನಾಗಮಂಗಳ ತಾಲೂಕಿನ ದೇವರಮಾವಿನಕೆರೆ ಗ್ರಾಮದ ನಿವಾಸಿ ಧನಂಜೇಗೌಡ ನಿವಾಸಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಎ.ಎಲ್.ಸತೀಶ್ ಮತ್ತು ಮೈಸೂರು ತಾಲೂಕಿನ ನಾಡನಹಳ್ಳಿ ಗ್ರಾಮದ ಪುಟ್ಟರಾಜು ಎಂಬುವುರು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ಆದೇಶವೇನು?
ಪ್ರಕರಣದಲ್ಲಿ ಅರ್ಜಿದಾರರು ೬, ೭ ಮತ್ತು ೯ನೇ ಆರೋಪಿಗಳಾಗಿದ್ದು, ಗರ್ಭಿಣಿಯರನ್ನು ಗುರುತಿಸಿವ ಮಧ್ಯವರ್ತಿಗಳಾಗಿದ್ದು, ಅಕ್ರಮವಾಗಿ ಗರ್ಭ ಪಾತಕ್ಕೆ ಒಳಗಾಗುವಂತೆ ಪ್ರೇರೇಪಿಸಿರುವ ಗಂಭೀಯರ ಸ್ವರೂಪದ ಆರೋಪವಾಗಿದೆ. ಜೊತೆಗೆ, ಆರೋಪ ಸಂಬಂಧ ಪ್ರಕರಣ 2024 ಏಪ್ರಿಲ್ 24ರಂದು ದಾಖಲಾಗಿದ್ದು, ಈವರೆಗೂ ಆರೋಪಿಗಳು ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ ಪ್ರಕರಣದ ಸ್ವರೂಪವನ್ನು ಪರಿಗಣಿಸಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಲು ಅರ್ಹರಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು..?
ಅರ್ಜಿದಾರರು, ಭ್ರೂಣಗಳ ಆರೋಗ್ಯ ಪರೀಕ್ಷೆಗಾಗಿ ಲ್ಯಾಬ್‌ಗಳಿಗೆ ಬರುವ ಮಹಿಳೆಯರಿಗೆ ಭ್ರೂಣ ಪತ್ತೆಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಿದ್ದರು. ಬಳಿಕ ಅವರಿಗೆ ಭ್ರೂಣ ಹತ್ಯೆಗೆ ಪ್ರೇರೇಪಿಸುತ್ತಿದ್ದರು. ಬಳಿಕ ಪ್ರಕರಣದಲ್ಲಿ ಇನ್ನಿತರೆ ಆರೋಪಿಗಳೊಂದಿಗೆ ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದಲ್ಲಿ ಆಲೆ ಮನೆಯಲ್ಲಿ ಪರೀಕ್ಷೆ ಮಾಡಿಸಿ ಹೆಣ್ಣು ಮಗು ಎಂದು ಗೊತ್ತಾದರೆ, ಗರ್ಭಪಾತ ಮಾಡಿಸುತ್ತಿದ್ದರು. ಕಮಿಷನ್ ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು.
ಈ ಸಂಬಂಧ ಮಾಹಿತಿ ಪಡೆದ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೂಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ೩೧೨(ಗರ್ಭಪಾತ), ೩೧೪(ಗರ್ಭಪಾತದಿಂದ ಉಂಟಾದ ಸಾವು), ೩೧೫(ಮಗು ಸಜೀವವಾಗಿ ಜನನವಾಗದಂತೆ ಮಾಡುವುದು) ೩೧೬(ಗಭಾವಸ್ಥೆಯಲ್ಲಿ ನರ ಹತ್ಯೆ) ಮತ್ತು ವೈದ್ಯಕೀಯ ಗರ್ಭಸಮಾಪನ ಅಧಿನಿಯಮ ೧೯೭೧ ಸೆಕ್ಷನ್ ೪(ಗರ್ಭದಾರಣೆ ಕೊನೆಗೊಳಿಸುವುದು)ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದು, ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications