Karnataka Heat Wave: ರಾಜ್ಯದಲ್ಲಿ ಮತ್ತೆ ಉರಿ ಬಿಸಿಲು! ಕೊಪ್ಪಳದಲ್ಲಿ 36°C ತಾಪಮಾನ: 5 ದಿನ ಹವಾಮಾನ ಮುನ್ಸೂಚನೆ
ಬೆಂಗಳೂರು: ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆ ಸಾಮಾನ್ಯವಾಗಿದ್ದು, ಒಳನಾಡು ಕರ್ನಾಟಕದಲ್ಲಿ ದುರ್ಬಲವಾಗಿದೆ. ಇನ್ನೂ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆ ಆಗಿದ್ದು, ಬಿಟ್ಟರೆ ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಉಷ್ಣ ಅಲೆಯ (Heat Wave Karnataka) ವಾತಾವರಣ ಕಂಡು ಬಂದಿದೆ. ಇಂದು ಶನಿವಾರ (ಸೆಪ್ಟೆಂಬರ್ 26) ರಂದು ಕೊಪ್ಪಳದಲ್ಲಿ ಬರೋಬ್ಬರಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇನ್ನಿತರ ಜಿಲ್ಲೆಗಳಲ್ಲಿ ಬಿಸಿಲು ಮೇಲುಗೈ ಸಾಧಿಸಿದ್ದು, ಜನರು ಉರಿಬಿಸಿಲಿಗೆ ತತ್ತರಿಸಿದ್ದಾರೆ. ರಾಜ್ಯದ ಹವಾಮಾನ ಮುನ್ಸೂಚನೆ ಮುಂದಿದೆ.
ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಗಾಲ (ಜೂನ್ 1-ಸೆಪ್ಟೆಂಬರ್ 30) ಅಂತ್ಯವಾಗಲಿದೆ. ಕಳೆದ ಎರಡು ಮೂರು ವಾರಗಳಿಂದ ಇದ್ದ ಬಿಸಿಲು ನಡುವೆ ತಾತ್ಕಾಲಿಕವಾಗಿ ಕಡಿಮೆ ಆಗಿದ್ದು, ಇದೀಗ ಮತ್ತೆ ಭಾರೀ ಪ್ರಮಾಣದಲ್ಲಿ ದಾಖಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ ವಾಡಿಕೆ ಗಡಿ ದಾಟಿದೆ. ಇಲ್ಲಿನ ಜನರು ಚಳಿಗಾಲ ಆರಂಭವಾಗುವ ಮೊದಲೇ ಮಳೆಗಾದಲ್ಲೇ ಬಿರು ಬೇಸಿಗೆ ಅನುಭವಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಬರುವುದು ಕಷ್ಟಕರದ ಸ್ಥಿತಿ ನಿರ್ಮಾಣವಾಗಿದೆ.

ಶನಿವಾರ ಒಳನಾಡು ಜಿಲ್ಲೆಗಳಲ್ಲಿ ದಾಖಲೆಯ ತಾಪಮಾನ!
ಕೊಪ್ಪಳ ಬಳಿಕ ವಿಜಯಪುರದಲ್ಲಿ ಗರಿಷ್ಠ ತಾಪಮಾನ ಬರೋಬ್ಬರಿ 35 ಡಿಗ್ರಿ ಸೆಲ್ಸಿಯಸ್, ಕಲಬುರಗಿ 34 ಡಿಗ್ರಿ ಸೆಲ್ಸಿಯಸ್, ಬೀದರ್ 33 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ 33 ಡಿಗ್ರಿ ಸೆಲ್ಸಿಯಸ್, ತುಮಕೂರಲ್ಲಿ ಒಂದು ಕಡೆ 32 ಡಿಗ್ರಿ ಸೆಲ್ಸಿಯಸ್, ರಾಯಚೂರಲ್ಲಿ 32 ಡಿಗ್ರಿ ಸೆಲ್ಸಿಯಸ್, ಗದಗ 32 ಡಿಗ್ರಿ ಸೆಲ್ಸಿಯಸ್, ಕಾರವಾರ 32 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗದಲ್ಲಿ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಉಳಿದಂತೆ ಮಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ 31 ಡಿಗ್ರಿ ಸೆಲ್ಸಿಯಸ್, ಹಾವೇರಿ 31 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ, ಹೊನ್ನಾವರ, ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ, ಬೆಂಗಳೂರು ವಿಮಾನ ನಿಲ್ದಾಣ, ದೊಡ್ಡ ಬಳ್ಳಾಪುರ, ರಾಮನಗರದಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇತರ ಜಿಲ್ಲೆಗಳು/ಭಾಗಗಳಲ್ಲಿ ಗರಿಷ್ಠ ತಾಪಮಾನ ವಾಡಿಕೆ ಮೀರಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಇಂದಿನ ಸಂಜೆ ವರದಿಯಲ್ಲಿ ತಿಳಿಸಿದೆ.
ರಾಜ್ಯದ ಹವಾಮಾನ ಮುನ್ಸೂಚನೆ: ಉಷ್ಣ ಅಲೆ ಎಚ್ಚರಿಕೆ
ಐಎಂಡಿ ಪ್ರಕಾರ, ಮುಂದಿನ ಐದು ದಿನಗಳ ಕಾಲ ರಾಜ್ಯದ ಶಿವಮೊಗ್ಗ, ಕೊಡಗು ಸೇರಿ ಮಲೆನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಹಗುರ ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತು ಸದ್ಯಕ್ಕೆ ವ್ಯಾಪಕ ಮಳೆಯ ಲಕ್ಷಣಗಳು ಇಲ್ಲ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಉರಿ ಬಿಸಿಲು ದಾಖಲಾಗಿದೆ. ಎಲ್ಲೆಡೆ ಒಣಹವೆ ಕಂಡು ಬರಲಿದ್ದು, ವಾಡಿಕೆಗೂ ಅಧಿಕ ತಾಪಮಾನ (ಉಷ್ಣ ಅಲೆ) ಕಂಡು ಬರುವ ನಿರೀಕ್ಷೆಗಳು ಇವೆ.
ಇಂದಿನ ಮಳೆ ದಾಖಲಾತಿ ವಿವರ
ರಾಜ್ಯದಲ್ಲಿ ಬಹುತೇಕ ಮಳೆ ದುರ್ಬಲವಾಗಿದ್ದು, ಕೆಲವೆಡೆ ಹಗುರ ಮಳೆ ಆಗಿದೆ. ಅದರ ವಿವರ ನೋಡುವುದಾದರೆ, ಕೊಡಗಿನ ಭಾಗಮಂಡಲದಲ್ಲಿ 4 ಸೆಂಟಿ ಮೀಟರ್, ದಕ್ಷಿಣ ಕನ್ನಡ ಧರ್ಮಸ್ಥಳ 4 ಸೆಂ.ಮೀ, ಉಡುಪಿಯ ಕೊಲ್ಲೂರು 3, ಕೋಟಾದಲ್ಲಿ 3, ಮಂಕಿ 3 ಸೆಂ.ಮೀ, ಶಿವಮೊಗ್ಗದ ಆಗುಂಬೆಯಲ್ಲಿ 2, ಉತ್ತರ ಕನ್ನಡದ ಅಂಕೋಲಾ 2, ಚಿಕ್ಕಮಗಳೂರಿನ ಕೊಟ್ಟಿಗೆಹಾರ 2, ಕೊಡಗಿನ ನಾಪೋಕ್ಲು 2, ಚಿಕ್ಕಮಗಳೂರಿನ ಶೃಂಗೇರಿ 2, ಸುಳ್ಯ 2 ಸೆಂ.ಮೀ, ಅಮ್ಮತ್ತಿ ಯಲ್ಲಿ1 ಸೆಂ.ಮೀ ಮಳೆ ದಾಖಲಾಗಿದೆ.


Click it and Unblock the Notifications
