Bar License: ಹೊಸ ಬಾರ್ ತೆರೆಯುವವರಿಗೆ ಸರ್ಕಾರದಿಂದ ಗುಡ್‌ನ್ಯೂಸ್, ಲೈಸೆನ್ಸ್ ಖರೀದಿ ವಿವರ ಇಲ್ಲಿದೆ
ಯಾವ ವ್ಯಾಪಾರದಲ್ಲಿ ನಷ್ಟ ಆದರೂ ಬಾರ್ ಬಿಸಿನೆಸ್‌ನಲ್ಲಿ ನಷ್ಟ ಆಗೋಕೆ ಚಾನ್ಸೇ ಇಲ್ಲ ಅನ್ನೋ ಮಾತಿದೆ. ಇದೇ ಕಾರಣಕ್ಕೆ ಬಾರ್ ತೆರೆಯಲು ಉದ್ಯಮಿಗಳು ಮುಗಿಬೀಳುತ್ತಾರೆ. ಆದರೆ ಇದೇನು ಸುಲಭದ ಮಾತೇನಲ್ಲ. ಬಾರ್ ಲೈಸೆನ್ಸ್ ಪಡೆಯುವುದಕ್ಕೇ ಸಿಕ್ಕಾಪಟ್ಟೆ ಖರ್ಚಾಗುವ ಕಾರಣ ಪೈಪೋಟಿ ಕೂಡ ಹೆಚ್ಚು. ಆದರೆ ಒಮ್ಮೆ ಬಾರ್ ತೆರೆದವರ ಅದೃಷ್ಟದ ಬಾಗಿಲಂತೂ ತೆರೆಯುತ್ತಲೇ ಇರುತ್ತದೆ. ಈಗಂತೂ ಲೈಫಲ್ಲಿ ಸೆಟಲ್ ಆಗಬೇಕು ಅಂದ್ರೆ ಒಂದು ಬಾರ್ ತೆರೆದರೆ ಸಾಕು ಅಂತ ಎಷ್ಟೋ ಜನ ಕನಸು ಕಾಣ್ತಾರೆ. ಅಂತಹವರಿಗಾಗಿ ರಾಜ್ಯ ಸರ್ಕಾರವೇ ಸಿಹಿಸುದ್ದಿಯೊಂದನ್ನು ನೀಡಿದೆ.
ಹೌದು, ಬಾರ್ ಲೈಸೆನ್ಸ್ ಪಡೆಯುವ ವಿಚಾರವಾಗಿ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ರಾಜ್ಯ ಹಣಕಾಸು ಇಲಾಖೆಯು ನಿಷ್ಕ್ರಿಯ ಅಬಕಾರಿ ಪರವಾನಗಿಗಳನ್ನು ಹರಾಜು ಮಾಡಲು ಮುಂದಾಗಿದ್ದು, ಈ ಸಂಬಂಧ ಕರಡು ನಿಯಮಗಳನ್ನು ಸಹ ಹೊರಡಿಸಿದೆ. ಕರ್ನಾಟಕ ಸರ್ಕಾರವು ಇದೀಗ ಬಾಕಿ ಉಳಿದಿರುವ ಮದ್ಯ ಲೈಸೆನ್ಸ್ ಹರಾಜು ಹಾಕುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಹಣಕಾಸು ಇಲಾಖೆಯು ಸದ್ಯ ಬಾಕಿ ಉಳಿದಿರುವ ಅಬಕಾರಿ ಲೈಸೆನ್ಸ್‌ಗಳನ್ನ ಹರಾಜು ಮಾಡುವ ಕುರಿತು ಕರಡು ನಿಯಮಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ಸರ್ಕಾರವು ಈ ಮೂಲಕ ತನ್ನ ಹಣಕಾಸಿನ ಒತ್ತಡದ ನಡುವೆಯೂ ಸುಮಾರು 500 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದೆ ಎನ್ನಲಾಗಿದೆ.

ಯಾವೆಲ್ಲ ಲೈಸೆನ್ಸ್ ಲಭ್ಯ?
ರಾಜ್ಯ ಸರ್ಕಾರವು ಆದಾಯ ನಿರೀಕ್ಷೆಯಿಂದಲೇ ಮದ್ಯದ ಲೈಸೆನ್ಸ್‌ಗಳ ಹರಾಜಿಗೆ ಮುಂದಾಗಿದೆ. ಈ ಮೂಲಕ ಹೆಚ್ಚುವರಿ ಸಂಪನ್ಮೂಲಗಳನ್ನು ಒಗ್ಗೂಡಿಸಲು ನಿಷ್ಕ್ರಿಯವಾಗಿ ಉಳಿದಿರುವ ಚಿಲ್ಲರೆ ಮದ್ಯದ ಅಂಗಡಿ (CL-2) ಲೈಸೆನ್ಸ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ (CL-9) ಲೈಸೆನ್ಸ್‌ಗಳನ್ನು ಹರಾಜು ಹಾಕಲು ಮುಂದಾಗಿದೆ. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ನಡೆಸುವ ಚಿಲ್ಲರೆ ಮಾರಾಟ ಮಳಿಗೆಗಳಿಗೆ ನೀಡಲಾಗುವ CL-11(C) ಲೈಸೆನ್ಸ್‌ಗಳನ್ನು ಕೂಡ ಅಧಿಕಾರಿಗಳು ಹರಾಜು ಹಾಕಲಿದ್ದಾರೆ ಎಂದು ವರದಿಯಾಗಿದೆ.
ಒಂದು ಲೈಸೆನ್ಸ್‌ಗೆ ಎಷ್ಟು ಖರ್ಚಾಗುತ್ತೆ?
1992ರಿಂದಲೂ ರಾಜ್ಯದಲ್ಲಿ ಹೊಸ CL-2 ಮತ್ತು CL-9 ಲೈಸೆನ್ಸ್‌ಗಳನ್ನು ನೀಡಿಲ್ಲ. ಬರೋಬ್ಬರಿ 3,995 CL-2 ಹಾಗೂ 3,637 CL-9 ಲೈಸೆನ್ಸ್‌ಗಳು ಲಭ್ಯವಿದ್ದು, ಇವುಗಳನ್ನು ಪ್ರತಿ ವರ್ಷ ನವೀಕರಿಸಲಾಗುತ್ತಿದೆ. ಈ ಹೊಸ ಲೈಸೆನ್ಸ್‌ಗಳ ಸ್ಥಗಿತದಿಂದಾಗಿ ಈಗಿರುವ ಲೈಸೆನ್ಸ್‌ಗಳು ದುಬಾರಿ ಬೆಲೆಗೆ ಮಾರಾಟ ಆಗುತ್ತವೆ. ಒಂದು ಲೈಸೆನ್ಸ್ ಪಡೆಯಲು ಕೋಟಿ ಕೋಟಿ ಖರ್ಚು ಮಾಡಬೇಕಾಗುತ್ತದೆ. ಸರ್ಕಾರ ಈ ಲೈಸೆನ್ಸ್‌ಗಳಿಗೆ ವಾರ್ಷಿಕ ಶುಲ್ಕ ಸಂಗ್ರಹಿಸುತ್ತವೆ. ಮೂಲಗಳ ಪ್ರಕಾರ CL-2 ಲೈಸೆನ್ಸ್‌ಗೆ ವಾರ್ಷಿಕ ಶುಲ್ಕ 4ರಿಂದ 6 ಲಕ್ಷ ರೂಪಾಯಿ, CL-9 ಲೈಸೆನ್ಸ್‌ಗೆ 7.5 ಲಕ್ಷ ರೂವರೆಗೆ ಶುಲ್ಕ ಇದೆ ಎನ್ನಲಾಗಿದೆ.

ಬೆಂಗಳೂರು ಭಾಗದಲ್ಲಿ ಒಂದು ಲೈಸೆನ್ಸ್ ಅನ್ನು 3.8 ಕೋಟಿ ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ. ಹರಾಜಿನಲ್ಲಿ ಪ್ರತಿ ಲೈಸೆನ್ಸ್‌ಗೆ 3 ಕೋಟಿ ರೂ.ಗಳವರೆಗೆ ದರ ನಿಗದಿಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಹೊರಭಾಗದ ಲೈಸೆನ್ಸ್‌ಗಳು 1 ಕೋಟಿ ರೂ.ಗಳವರೆಗೆ ಮಾರಾಟ ಆಗಬಹುದು. ಒಟ್ಟಾರೆ ಈ ಹರಾಜಿನಿಂದ ಸುಮಾರು 500 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಬಾರ್ ಲೈಸೆನ್ಸ್ ಪಡೆಯಬೇಕು ಎಂದು ವರ್ಷಗಳಿಂದ ಕಾದಿದ್ದವರಿಗೆ ಇದೀಗ ಸುವರ್ಣವಕಾಶ ಒದಗಿ ಬಂದಿದೆ.












Click it and Unblock the Notifications