ಕರ್ನಾಟಕ: 15 ವರ್ಷದ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಮಹತ್ವದ ನಿರ್ಧಾರ, ಇಲ್ಲಿದೆ ವಿವರ
ಬೆಂಗಳೂರು, ಸೆಪ್ಟೆಂಬರ್, 23: ಕೇಂದ್ರ ಸರ್ಕಾರದ 2022ರ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯ ಅನ್ವಯದಡಿ 15 ವರ್ಷದ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಾದರೆ ಈ ನಿರ್ಧಾರದಿಂದ ಸರ್ಕಾರಕ್ಕೆ ತಗಲುವ ವೆಚ್ಚ ಎಷ್ಟು? ಹಾಗೂ ಕೇಂದ್ರ ಸರ್ಕಾರದಿಂದ ಬರುವ ಪ್ರೋತ್ಸಾಹ ಧನ ಎಷ್ಟು ಅನ್ನುವ ವಿವರನ್ನು ಇಲ್ಲಿ ತಿಳಿಯಿರಿ.
ಕೇಂದ್ರ ಸರ್ಕಾರದ 2022ರ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಬಳಿಯಿರುವ 15 ವರ್ಷದ ಹಳೆ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನ ಮಾಡಲಾಗಿದೆ ಎಂದು ಸಂಪುಟ ಸಭೆಯ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದ ಬಳಿ 15 ವರ್ಷಕ್ಕಿಂತ ಹಳೆಯ 15,295 ವಾಹನಗಳಿದ್ದು, ಇವುಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ಪಡೆಯಬೇಕಿದೆ. ಇದರಿಂದ ಸರ್ಕಾರಕ್ಕೆ 500 ಕೋಟಿ ರೂಪಾಯಿನಷ್ಟು ವೆಚ್ಚ ತಗಲುತ್ತದೆ. ಮೊದಲ ಹಂತದಲ್ಲಿ 5,000 ವಾಹನಗಳನ್ನು ಗುಜರಿಗೆ ಹಾಕಲು ನಿರ್ಧರಿಸಲಾಗಿದ್ದು, ನಂತರ ಹಂತ ಹಂತವಾಗಿ ಉಳಿದ ವಾಹನಗಳನ್ನು ಗುಜರಿಗೆ ಹಾಕಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂಪಾಯಿನಷ್ಟು ಪ್ರೋತ್ಸಾಹ ಧನ ದೊರೆಯಲಿದೆ ಎನ್ನುವ ಮಾಹಿತಿಯನ್ನು ನೀಡಿದರು.
15 ವರ್ಷ ಹಳೆಯ ವಾಹನಗಳನ್ನಯ ಗುಜರಿಗೆ ಹಾಕುವ ಈ ನೀತಿಯು ಖಾಸಗಿ ವಾಹನಗಳಿಗೂ ಅನ್ವಯ ಆಗಲಿದೆ. ಈ ನಿಯಮವನ್ನು ಖಾಸಗಿ ವಾಹನಗಳಿಗೂ ಜಾರಿ ಮಾಡಲು ಕೇಂದ್ರ ಸರ್ಕಾರದ ಒತ್ತಡ ಇದೆ. ಸದ್ಯ ಸರ್ಕಾರಿ ವಾಹನಗಳಿಗೆ ಮಾತ್ರ ಇದು ಜಾರಿ ಆಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.












Click it and Unblock the Notifications